ಆಮದು ಅಭ್ಯರ್ಥಿಗೆ ಬೆಂಬಲ ಸಿಗಲ್ಲ : ಕೊಡಗು ಬಿಜೆಪಿ ಪ್ರತಿಪಾದನೆ

25/11/2021

ಮಡಿಕೇರಿ ನ.25 : ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾಗುವ ಹಕ್ಕು ಹೊಂದಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಆಮದು ಅಭ್ಯರ್ಥಿಗೆ ಬೆಂಬಲ ಸಿಗಲು ಸಾಧ್ಯವಿಲ್ಲವೆಂದು ಪ್ರತಿಪಾದಿಸಿರುವ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಹಣ ಇದ್ದವರಿಗೆ ಮಣೆ ಹಾಕುವ ಕಾಂಗ್ರೆಸ್ ತಿರುಕನ ಕನಸು ಕಾಣುವುದು ಬೇಡವೆಂದು ಲೇವಡಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ಅಭ್ಯರ್ಥಿ ಹೊರ ಜಿಲ್ಲೆಯವರು ಎಂದು ಬಿಜೆಪಿ ನಾಯಕರು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಹಾಸನ ಜಿ.ಪಂ ಮಾಜಿ ಸದಸ್ಯ ಮಂಥರ್ ಗೌಡ ಅವರನ್ನು ಹೇಗೆ ಕೊಡಗಿನವರೆಂದು ಒಪ್ಪಿಕೊಳ್ಳುತ್ತಾರೆ ಎನ್ನುವುದನ್ನು ಇಲ್ಲಿನ ಕಾಂಗ್ರೆಸ್ಸಿಗರು ಸಾಬೀತು ಪಡಿಸಲಿ ಎಂದು ಸವಾಲು ಹಾಕಿರುವ ಅವರು, ಯಾವುದೇ ಮಾನದಂಡವಿಲ್ಲದೆ ಹಣದ ಚೀಲ ಹಿಡಿದು ಬಂದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ತಮ್ಮದಲ್ಲದ ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಕಾಂಗ್ರೆಸ್ ನೀಡಿದ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಮಹೇಶ್ ಜೈನಿ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ರೀತಿ ನೀತಿಗಳೇ ಬೇರೆ ಇರುತ್ತದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಜನಪ್ರತಿನಿಧಿಗಳೇ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಾಗಿರುವುದರಿಂದ ಸ್ಥಳೀಯವಾಗಿ ಎಲ್ಲಾ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ. ಅಲ್ಲದೆ ಸ್ಥಳೀಯರೇ ಎಂಎಲ್‌ಸಿ ಆಗುವುದರಿಂದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ ಎನ್ನುವ ಅರಿವು ಕೊಡಗಿನ ಮತದಾರರಿಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
::: ಬಿಜೆಪಿ ಮತ್ತಷ್ಟು ಬಲವಾಗಿದೆ :::
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಬಿಜೆಪಿ ಒಡೆದ ಮನೆ ಎಂದು ಟೀಕಿಸಿರುವುದು ಖಂಡನೀಯ. ಈ ರೀತಿಯ ಕ್ಷುಲ್ಲಕ ಹೇಳಿಕೆಗಳಿಂದ ಬಿಜೆಪಿಯನ್ನು ಮಣಿಸಬಹುದೆನ್ನುವ ತಿರುಕನ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ ಎಂದು ಮಹೇಶ್ ಜೈನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯರ ತ್ಯಾಗಬಲಿದಾನಗಳಿಂದ ಕಟ್ಟಿದ ಮನೆ ಬಿಜೆಪಿ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಸೂತ್ರದೊಂದಿಗೆ ಯಶಸ್ಸನ್ನು ಸಾಧಿಸುತ್ತಾ ಬಂದಿದೆ. ದಿನದಿಂದ ದಿನಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವ ಬಿಜೆಪಿ ಯಾವುದೇ ಕಾರಣಕ್ಕೂ ಒಡೆದ ಮನೆಯಾಗಲು ಸಾಧ್ಯವಿಲ್ಲ. ಕಾಂಗ್ರೆಸ್ಸಿಗರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದನ್ನು ಮೊದಲು ಬಿಡಲಿ ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುಜಾಕುಶಾಲಪ್ಪ ಅವರು ಕಳೆದ ಅನೇಕ ವರ್ಷಗಳಿಂದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡಿದ ಅನುಭವವಿದೆ. ಇದನ್ನು ಜಿಲ್ಲೆಯ ಮತದಾರರು ಮನಗಂಡಿದ್ದು, ಅತ್ಯಧಿಕ ಮತಗಳನ್ನು ನೀಡುವ ಮೂಲಕ ಗೆಲುವು ತಂದುಕೊಡಲಿದ್ದಾರೆ. ಕೊಡಗು ಬಿಜೆಪಿಯ ಭದ್ರಕೋಟೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಲಿದ್ದಾರೆ ಎಂದು ಮಹೇಶ್ ಜೈನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.