ಮಡಿಕೇರಿ : ಕಾಂಗ್ರೆಸ್ ಕಾಲದಲ್ಲಿ ಕನಿಷ್ಠ ಗೊಬ್ಬರವನ್ನು ಕೂಡ ಕೃಷಿಕ ವರ್ಗಕ್ಕೆ ನೀಡುತ್ತಿರಲಿಲ್ಲ

25/11/2021

ಮಡಿಕೇರಿ ನ.25 : ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸುಮಾರು 7 ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ರೈತರ ಏಳಿಗೆಗಾಗಿ ಏನು ಮಾಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಪ್ರಶ್ನಿಸಿದ್ದಾರೆ.
ಸಕಾಲದಲ್ಲಿ ರೈತರಿಗೆ ಗೊಬ್ಬರ ಒದಗಿಸಲು ಸಾಧ್ಯವಾಗದ ಹೀನಾಯ ಸ್ಥಿತಿಯಲ್ಲಿ ಕಾಂಗ್ರೆಸ್ ಆಡಳಿತ ನಡೆಯುತ್ತಿತ್ತು ಎಂದು ಟೀಕಿಸಿರುವ ಅವರು, ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರಕಾರಗಳು ಕೃಷಿಕ ವರ್ಗಕ್ಕಾಗಿ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ನೈಜ ರೈತರಿಗೆ ಅರಿವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮುಖ್ಯಮoತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ವಾರ್ಷಿಕ 3 ಕಂತುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗೆ ನೆರವು ನೀಡುತ್ತಿವೆ. ಕೃಷಿ ಫಸಲಿಗೆ ಬೆಂಬಲ ಬೆಲೆ ಸೇರಿದಂತೆ ಅನ್ನದಾತರ ಅಭ್ಯುದಯಕ್ಕಾಗಿ ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಇವುಗಳ ಬಗ್ಗೆ ಕಾಂಗ್ರೆಸ್ಸಿಗರು ಮಾಹಿತಿ ಪಡೆದು ನಂತರ ಮಾತನಾಡಲಿ, ತಮ್ಮ ಸರಕಾರದ ಅವಧಿಯ ವೈಫಲ್ಯಗಳನ್ನು ಮರೆ ಮಾಚಲು ಜನಪರ ಕಾಳಜಿಯ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲವೆಂದು ಮಹೇಶ್ ಜೈನಿ ತಿಳಿಸಿದ್ದಾರೆ.