ಹಂಸಲೇಖ ವಿರುದ್ಧದ ದೂರುಗಳನ್ನು ಮುಕ್ತಾಯಗೊಳಿಸಿ : ಪ್ರಜಾಪರಿವರ್ತನಾ ವೇದಿಕೆ ಒತ್ತಾಯ

25/11/2021

ಮಡಿಕೇರಿ ನ.25 : ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ದೂರುಗಳನ್ನು ಮುಕ್ತಾಯಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಪ್ರಜಾ ಪರಿವರ್ತನಾ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಹೆಚ್.ಎಸ್.ಮುತ್ತಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿನಾಕಾರಣ ಖ್ಯಾತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ವಿವಾದವನ್ನು ಸೃಷ್ಟಿಸಲಾಗಿದ್ದು, ಇದು ಖಂಡನೀಯವೆoದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾನಸ ಗಂಗೋತ್ರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಂಸಲೇಖ ಅವರು ನೀಡಿದ ಹೇಳಿಕೆಯಿಂದ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಸರಕಾರ ಮುಂದಾಗಬೇಕು. ಹಂಸಲೇಖ ಪ್ರಜ್ಞಾವಂತ ವ್ಯಕ್ತಿಯಾಗಿದ್ದು, ಧೀಮಂತ ವಿಚಾರಧಾರೆಯ ಸಂಗೀತ ನಿರ್ದೇಶಕರಾಗಿದ್ದಾರೆ. ಗೀತೆ ರಚನೆಯ ಮೂಲಕ ನಾಡು, ನುಡಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಈಗ ಎದ್ದಿರುವ ವಿವಾದವನ್ನು ಸರಕಾರ ಗಂಭೀರವಾಗಿ ಪರಿಗಣಿಸದೆ ಮತ್ತು ಯಾವುದೇ ಒತ್ತಡಕ್ಕೆ ಮಣಿಯದೆ ಎಲ್ಲಾ ದೂರುಗಳನ್ನು ಮುಕ್ತಾಯಗೊಳಿಸಬೇಕೆಂದು ಮುತ್ತಪ್ಪ ಒತ್ತಾಯಿಸಿದ್ದಾರೆ.