ಸೋಮವಾರಪೇಟೆ ಹಲ್ಲೆ ಪ್ರಕರಣ : ದೂರು ದಾಖಲು

25/11/2021

ಸೋಮವಾರಪೇಟೆ ನ.25 : ಹಲ್ಲೆ ಪ್ರಕರಣಕ್ಕೆ ಸಂಬoಧಿಸಿದಂತೆ ಉಭಯ ಕಡೆಗಳಿಂದ ಸೋಮವಾರಪೇಟೆ  ಠಾಣೆಯಲ್ಲಿ ದೂರು ದಾಖಲಾಗಿವೆ.
ಅಸ್ಸಾಂ ಮೂಲದ ಅರೋಪಿ ಫೈಜುದ್ದೀನ್, ರೈಟರ್ ವಸಂತ್ ಎಂಬುವವರ ಮೇಲೆ ಹಲ್ಲೆಗೈದ ದೂರಿನನ್ವಯ ಆರೋಪಿ ವಿರುದ್ಧ ಐಪಿಸಿ 307 ಅನ್ವಯ ಮೊಕದ್ದಮೆ ದಾಖಲಾಗಿದೆ. ಫೈಜುದ್ಧೀನ್ ನೀಡಿದ ದೂರಿನನ್ವಯ ವಸಂತ್ ವಿರುದ್ಧ ಐಪಿಸಿ 354 ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ.
::: ಪ್ರಕರಣ ಹಿನ್ನೆಲೆ :::

ತಾಲೂಕಿನ ಕುಂಬೂರು ಎಜೆ ಎಸ್ಟೇಟ್‌ನಲ್ಲಿ ಅಸ್ಸಾಂ ಮೂಲದ 25 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೂಲಿ ಹಣ ಜಾಸ್ತಿ ಮಾಡಬೇಕೆಂದು ಫೈಜುದ್ದೀನ್ ರೈಟರ್ ವಸಂತ್ ಮೇಲೆ ಒತ್ತಡ ಹಾಕಿದ್ದಾನೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಈ ಸಂದರ್ಭ ಫೈಜುದ್ದೀನ್ ದೊಣ್ಣೆಯಿಂದ ವಸಂತ್ ತಲೆಗೆ ಹಲ್ಲೆ ಮಾಡಿದ್ದಾನೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗಾಯಾಳು ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ತಂಗಿಯ ಅಪ್ರಾಪ್ತ ಮಗಳೊಂದಿಗೆ ರೈಟರ್ ಅಸಭ್ಯ ವರ್ತಿಸಿದ್ದಾನೆ ಎಂದು ವಿಡಿಯೋ ತುಣುಕುಗಳೊಂದಿಗೆ ಪೊಲೀಸರಿಗೆ ಫೈಜುದ್ದೀನ್ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇರ್ವರನ್ನು ಬಂಧಿಸಿ, ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.