ಇಸಾಕ್ ಖಾನ್ ರನ್ನು ಬೆಂಬಲಿಸಿ : ಪರಿಶಿಷ್ಟ ಜಾತಿ ಘಟಕ ಮನವಿ

25/11/2021

ಮಡಿಕೇರಿ ನ.25 : ಜಾತ್ಯತೀತ ನೆಲೆಗಟ್ಟಿನ ಪ್ರಾದೇಶಿಕ ಪಕ್ಷ ಜೆಡಿಎಸ್ ಅಲ್ಪಸಂಖ್ಯಾತರೊಬ್ಬರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು, ಇಸಾಕ್ ಖಾನ್ ಅವರನ್ನು ಕೊಡಗಿನ ಮತದಾರರು ಬೆಂಬಲಿಸಬೇಕೆoದು ಪಕ್ಷದ ಪರಿಶಿಷ್ಟ ಜಾತಿ ಘಟಕದ ಕಾರ್ಯದರ್ಶಿ ಹೆಚ್.ಎನ್.ಯೋಗೇಶ್ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಜಿಲ್ಲೆಗೆ ಜನಪರ ಯೋಜನೆಗಳನ್ನು ನೀಡಿದ್ದಾರೆ. 2018 ರಲ್ಲಿ ಸಂಭವಿಸಿದ ಅತಿವೃಷ್ಟಿ ಅನಾಹುತದ ಸಂದರ್ಭ ಸಂತ್ರಸ್ತರಿಗೆ 800ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಮತ್ತು ಪರಿಹಾರವನ್ನು ವಿತರಿಸಿದ್ದಾರೆ. ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವ ಕುಮಾರಸ್ವಾಮಿ ಅವರ ಕೈಬಲಪಡಿಸಲು ವಿಧಾನ ಪರಿಷತ್ ಚುನಾವಣೆಯಲ್ಲಿ ಇಸಾಕ್ ಖಾನ್ ಅವರಿಗೆ ಬಹುಮತ ನೀಡಿ ಗೆಲ್ಲಿಸಬೇಕೆಂದು ಕೋರಿದ್ದಾರೆ.
ಯಾವುದೇ ಜಾತಿ, ಧರ್ಮ, ಬೇಧವಿಲ್ಲದೆ ಸರ್ವರನ್ನು ಸಮಾನವಾಗಿ ಕಾಣುವ ಜೆಡಿಎಸ್ ಪಕ್ಷ ಸಾಮಾಜಿಕ ನ್ಯಾಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅಲ್ಪಸಂಖ್ಯಾತರೊಬ್ಬರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಪಕ್ಷದ ವರಿಷ್ಠರು ಜಾತ್ಯತೀತ ವ್ಯವಸ್ಥೆಯ ಘನತೆಯನ್ನು ಹೆಚ್ಚಿಸಿದ್ದಾರೆ. ಆದ್ದರಿಂದ ಸರ್ವ ಮತದಾರರು ಸೌಹಾರ್ದತೆಗೆ ಆದ್ಯತೆ ನೀಡುವ ಅಭಿವೃದ್ಧಿ ಪರ ಚಿಂತನೆಯ ಇಸಾಕ್ ಖಾನ್ ಅವರಿಗೆ ಮತ ನೀಡಬೇಕೆಂದು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಜೆಡಿಎಸ್ ತೀವ್ರ ಪೈಪೋಟಿಯನ್ನು ನೀಡಲಿದೆ ಎಂದು ಹೇಳಿದ್ದಾರೆ.