ಮೂರ್ನಾಡು- ನಾಪೋಕ್ಲು ರಸ್ತೆ ಅವ್ಯವಸ್ಥೆ : ಚುನಾವಣೆ ದಿನವೇ ರಸ್ತೆ ತಡೆ ಪ್ರತಿಭಟನೆಗೆ ನಿರ್ಧಾರ

25/11/2021

ಮಡಿಕೇರಿ ನ.25 : ಹದಗೆಟ್ಟಿರುವ ಮೂರ್ನಾಡು- ನಾಪೋಕ್ಲು ರಸ್ತೆ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೊದ್ದೂರು ಗ್ರಾ.ಪಂ ಪ್ರತಿನಿಧಿಗಳು ಡಿ.10 ರಂದು ವಿಧಾನ ಪರಿಷತ್ ಚುನಾವಣೆ ದಿನವೇ ರಸ್ತೆ ತಡೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಕಳೆದ 3 ವರ್ಷಗಳಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮೂರ್ನಾಡು ಕಾಲೇಜಿನಿಂದ ಹೊದ್ದೂರು ಶಾಲೆಯವರೆಗೆ ವಾಹನಗಳ ಸಂಚಾರ ಅಸಾಧ್ಯವಾಗಿದೆ. ಪಾದಾಚಾರಿಗಳಿಗೂ ಈ ರಸ್ತೆಯಲ್ಲಿ ಸಾಗಲು ಕಷ್ಟವಾಗುತ್ತಿದ್ದು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸೇರಿಸಲು ಹರಸಾಹಸ ಪಡಬೇಕಾಗಿದೆ. ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋದ ವಾಹನಗಳು ಅಪಘಾತಕ್ಕೀಡಾದ ಘಟನೆಗೂ ನಡೆದಿದೆ.
ಜಿಲ್ಲಾಡಳಿತ ಹಾಗೂ ಸಂಬoಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ರಸ್ತೆ ಅವ್ಯವಸ್ಥೆಯ ಚಿತ್ರಣವನ್ನು ವಿವರಿಸಿ ವರ್ಷ ಸಮೀಪಿಸಿದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಹೊದ್ದೂರು ಗ್ರಾ.ಪಂ ಸದಸ್ಯ ಕೆ.ಮೊಣ್ಣಪ್ಪ ಆರೋಪಿಸಿದ್ದಾರೆ.
ಡಿ.10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸದೆ ಬಹಿಷ್ಕರಿಸಲು ಪಂಚಾಯ್ತಿ ಪ್ರತಿನಿಧಿಗಳು ನಿರ್ಧಾರ ಕೈಗೊಂಡಿದ್ದೇವೆ. ಚುನಾವಣೆ ದಿನವೇ ರಸ್ತೆ ತಡೆವ ಪ್ರತಿಭಟನೆ ನಡೆಸಿ ಆಡಳಿತ ವ್ಯವಸ್ಥೆಯ ಗಮನ ಸೆಳೆಯುವುದಾಗಿ ಅವರು ಹೇಳಿದ್ದಾರೆ.