ವಿಧಾನ ಪರಿಷತ್ ಚುನಾವಣೆ : ವಾದ ಮಂಡಿಸಿ ಗೆದ್ದ ಎ.ಎಸ್.ಪೊನ್ನಣ್ಣ

25/11/2021

ಮಡಿಕೇರಿ ನ.25 : ಮೈಸೂರು ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ತಿಮ್ಮಯ್ಯ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಕೆಲವು ಆಕ್ಷೇಪಣೆಗಳನ್ನು ಬಿ.ಜೆ.ಪಿಯ ಅಭ್ಯರ್ಥಿ ಸಲ್ಲಿಸಿದ್ದರು. ಆ ಆಕ್ಷೇಪಣೆಗಳ ವಿಚಾರಣೆ ಇಂದು ನಿಗದಿಯಾಗಿತ್ತು.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ, ವಕೀಲ ಎ.ಎಸ್.ಪೊನ್ನಣ್ಣ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಅಧಿಕಾರಿಗಳ ಮುಂದೆ ಹಾಜರಾಗಿ, ಬಿಜೆಪಿ ಪಕ್ಷ ಸಲ್ಲಿಸಿದ್ದ ಆಕ್ಷೇಪಣೆಗಳಿಗೆ ಉತ್ತರವನ್ನು ನೀಡಿ ವಾದವನ್ನು ಮಂಡಿಸಿದರು.  ವಾದವನ್ನು ಪುರಸ್ಕರಿಸಿದ ಚುನಾವಣಾ ಅಧಿಕಾರಿಗಳು ಬಿಜೆಪಿಯ ಆಕ್ಷೇಪಣೆಗಳನ್ನು ತಿರಸ್ಕರಿಸಿದ್ದಾರೆ. ಡಾ.ತಿಮ್ಮಯ್ಯ ಅವರ ನಾಮಪತ್ರವನ್ನು ಅಂಗೀಕರಿಸಿದ್ದಾರೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಎ.ಎಸ್.ಪೊನ್ನಣ್ಣ ಅವರು ಪ್ರಕರಣದಲ್ಲಿ ನನಗೆ ಸಹಾಯ ಮಾಡಿದ ನನ್ನ ಸಹೋದ್ಯೋಗಿಗಳಾದ ಶತಭಿಷ್ ಶಿವಣ್ಣ, ಅಭಿಷೇಕ್ ಮತ್ತು ಕೆಪಿಸಿಸಿ ಕಾನೂನು ಘಟಕದ ಮೈಸೂರು ವಿಭಾಗದ ಎಲ್ಲಾ ಸ್ನೇಹಿತರಿಗೆ ಹಾಗೂ ಡಾ.ತಿಮಯ್ಯ ಅವರಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಚುನಾವಣೆಯಲ್ಲಿ ಡಾ.ತಿಮಯ್ಯನವರು ಗೆಲುವನ್ನು ಸಾಧಿಸಲಿ ಎಂದು ಕೂಡ ಹಾರೈಸುತ್ತೇನೆ ಎಂದು ಹೇಳಿದ್ದಾರೆ.