ಜ್ಞಾನಿಗಳು ಮೌನವಾದರೆ ಅಜ್ಞಾನಿಗಳು ಹೇಳುವ ಸುಳ್ಳುಗಳು ಜನರಿಗೆ ವೇದವಾಕ್ಯವಾಗುತ್ತದೆ : ಲೇಖನ : ಬಾಳೆಯಡ ಕಿಶನ್ ಪೂವಯ್ಯ

27/11/2021

ಭಾರತದಲ್ಲಿ ರಾಜಕೀಯ ವ್ಯವಸ್ಥೆಯು ಪ್ರಜಾಪ್ರಭುತ್ವದ ಆಧಾರದಲ್ಲಿ ನೆಲೆಕಂಡುಕೊoಡಿದೆ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ತಳಮಟ್ಟದಲ್ಲಿ ರಾಜಕೀಯ ಬೆಳವಣಿಗೆಗಾಗಿ ಮತ್ತು ಅಧಿಕಾರ ಹಂಚಿಕೆಗಾಗಿ ಉತ್ತಮ ಸಂಸದೀಯ ಪಟುಗಳನ್ನು ರೂಪಿಸಲು ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಜನರಿಂದ ಜನರಿಗಾಗಿ ಜನರಿಂದಲೇ ರಾಜಕಾರಣ ನಡೆಸಲು ಈ ವ್ಯವಸ್ಥೆ ಸೂಕ್ತವಾಗಿತ್ತು.

ಆದರೆ ಈ ವ್ಯವಸ್ಥೆ ಉತ್ತಮ ಆಡಳಿತ ನೀಡಲಿಲ್ಲ. ಉತ್ತಮ ರಾಜಕೀಯ ವ್ಯವಸ್ಥೆಗೆ ತಳಹದಿಯಾಗಲಿಲ್ಲ. ದೇಶಕ್ಕೆ ಉತ್ತಮ ಸಂಸದೀಯಪಟುವನ್ನು ರೂಪಿಸಲಿಲ್ಲ. ಪ್ರಗತಿಪರ ರಾಜಕೀಯ ಚಿಂತನೆಗಳು ಹುಟ್ಟಲಿಲ್ಲ. ಉತ್ತಮ ಆಡಳಿತವನ್ನಾಗಲಿ ಹೋರಾಟಗಾರರನ್ನಾಗಲಿ ರೂಪಿಸುವಲ್ಲಿ ವಿಫಲವಾಯಿತು. ಈ ವ್ಯವಸ್ಥೆ ಕೆಲವರಿಂದ ಕೆಲವರಿಗೋಸ್ಕರ ಕೆಲವರಿಗಾಗಿ ಮಾತ್ರ ಸೀಮಿತವಾಯಿತು. ಇದಕ್ಕೆ ಪ್ರಮುಖ ಕಾರಣವೇನೆಂದರೆ ಜಾತಿವಾರು ಪ್ರಾತಿನಿಧ್ಯತೆ ಮತ್ತು ಕ್ಷೇತ್ರ ಮೀಸಲಾತಿಯಿಂದ. ಈ ವ್ಯವಸ್ಥೆಯಲ್ಲೂ ಜಾತಿ ಬಲವಿದ್ದವನು ಹಣ ಬಲವಿದ್ದವನು ದೈಹಿಕ ಬಲವಿದ್ದವನು ಅದನ್ನು ಉಪಯೋಗಿಸಿ ಅಧಿಕಾರ ಪಡೆಯುವ ಅಭ್ಯಾಸವನ್ನು ಬೆಳೆಸಿಕೊಂಡ.
ರಾಜಕೀಯದಲ್ಲಿ ಇಂದು ಮೀಸಲಾತಿ ಅನಿವಾರ್ಯವೇ? ಖಂಡಿತ ಇಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಾವಿನ್ನೂ ಜಾತಿವಾರು ಲೆಕ್ಕದಲ್ಲಿ ಆಡಳಿತ ನಡೆಸುತ್ತಿದ್ದೇವೆ. ನಮ್ಮಗಳ ಮತ ಬೇಟೆಯು ಜಾತಿವಾರು ಲೆಕ್ಕಾಚಾರದಿಂದಲೇ ಪ್ರಾರಂಭವಾಗುತ್ತದೆ. 20-25 ವರ್ಷಗಳ ಹಿಂದೆ ರಾಜಕೀಯದಲ್ಲಿ ಮೀಸಲಾತಿ ಅನಿವಾರ್ಯವಾಗಿತ್ತು. ಎಕೆಂದರೆ ಅಂದು ಹಿಂದುಳಿದ ವರ್ಗದ ಧ್ವನಿಯಾಗಿ ಯಾರೂ ಇರಲಿಲ್ಲ. ಆದರೆ ಇಂದು ಅದರ ಅವಶ್ಯಕತೆ ಕಂಡುಬರುವುದಿಲ್ಲ. ಇಂದು ಸಾಧಾರಣವಾಗಿ ಸಮಾಜದಲ್ಲಿ ಎಲ್ಲರೂ ಸ್ವಾವಲಂಬಿಗಳಾಗಿದ್ದಾರೆ. ಮೀಸಲಾತಿ ವ್ಯವಸ್ಥೆಯಿಂದ ಬಡವರಿಗೆ ಪ್ರಯೋಜನವಾಗುತ್ತಿಲ್ಲ. ಈ ವ್ಯವಸ್ಥೆಯಲ್ಲೂ ಕೂಡ ಇರುವವನಿಗೆ ಅಧಿಕಾರ. ಯಾವಾಗಲೂ ರಾಜಕೀಯ ವ್ಯವಸ್ಥೆಯು ಸೈದ್ಧಾಂತಿಕ ಹಿನ್ನಲೆಯಲ್ಲಿ ನಡೆಯಬೇಕು ಹೊರತು ಜಾತಿವಾರು ಪ್ರಾತಿನಿಧ್ಯದಿಂದಲ್ಲ. ತುಳಿತಕ್ಕೊಳಗಾದವನ ಕೂಗಾಗಬೇಕಾಗಿದ್ದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿಯೂ ಇದು ಇರುವವರ ಪಾಲಾಗಿದೆ. ಈ ವ್ಯವಸ್ಥೆ ಸುಧಾರಿಸಬೇಕಾದರೆ ವಿದ್ಯಾರ್ಹತೆಗೆ ಪ್ರಾಶಸ್ತ್ಯ ನೀಡಬೇಕು.
ಮೀಸಲಾತಿಯಿಂದ ಮತ್ತು ಕ್ಷೇತ್ರ ಬದಲಾವಣೆಯಿಂದ ಆಗುವ ಇನ್ನೊಂದು ನಷ್ಟವೇನೆಂದರೆ ಅನೇಕ ಪ್ರತಿಭಾವಂತರು ಅವಕಾಶವಂಚಿತರಾಗುವುದು. ಅಧಿಕಾರ ನಡೆಸುವ ಎಲ್ಲಾ ರಾಜಕೀಯ ಪಕ್ಷಗಳು ತಮಗೆ ಬೇಕಾದವರಿಗಾಗಿ ಕ್ಷೇತ್ರಗಳನ್ನು ಪ್ರಬಲ ಅಭ್ಯರ್ಥಿಗಳನ್ನು ಸೋಲಿಸಲು ಮತ್ತು ತಮಗೆ ಬೇಕಾದವರನ್ನು ಗೆಲ್ಲಿಸಲು ಚುನಾವಣೆಯಲ್ಲಿ ಕ್ಷೇತ್ರ ಮೀಸಲಾತಿಯನ್ನು ಬಳಸಿಕೊಳ್ಳುವುದು ಸ್ಪಷ್ಟವಾಗಿ ಚುನಾವಣೆಯಲ್ಲಿ ಗೋಚರಿಸುತ್ತದೆ. ಈ ವ್ಯವಸ್ಥೆಯಿಂದ ಅನೇಕ ಪ್ರತಿಭಾವಂತ ರಾಜಕಾರಣಿಗಳು ಬೆಳಕಿಗೆ ಬರದೆ ತೆರೆಮರೆಯಲ್ಲಿ ಸರಿದು ಹೋಗುತ್ತಾರೆ. ಇನ್ನೊಂದೆಡೆ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಇರದೆ ನಾಮಕಾವಸ್ಥೆಗಾಗಿ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿ ಅವರನ್ನು ಮುಂದಿಟ್ಟುಕೊoಡು ಆಡಳಿತ ನಡೆಸುವುದನ್ನು ಕಂಡಿದ್ದೇವೆ. ಇಂತಹ ಅಭ್ಯರ್ಥಿಗಳು ಅಧ್ಯಕ್ಷ ಉಪಾಧ್ಯಕ್ಷರಾಗಿದ್ದರು, ಆಡಳಿತ ನಡೆಸುವವರು ಯಾರೋ ಆಗಿರುತ್ತಾರೆ. ಕೆಲವು ಕಡೆ ಹೆಂಡತಿಯನ್ನು ಗೆಲ್ಲಿಸಿ ಗಂಡoದಿರು ಆಡಳಿತ ನಡೆಸುತ್ತಿರುತ್ತಾರೆ. ಹೆಚ್ಚಿನ ಬಾರಿ ಅಧಿಕಾರದ ಅವಧಿ ಮುಗಿದ ನಂತರ ನಾಮಕಾವಸ್ಥೆಗೆ ಚುನಾವಣೆಗೆ ನಿಂತವರು ರಾಜಕೀಯ ಮತ್ತು ಸಮಾಜ ಸೇವೆಯಿಂದ ದೂರ ಸರಿಯುತ್ತಾರೆ. ಇಂತಹವರು ಸದಸ್ಯರಾಗಿದ್ದರೇ? ಎಂಬುದು ಜನರಿಗೆ ತಿಳಿಯುವುದಿಲ್ಲ. ಅದೇ ರೀತಿ ರಾಜಕೀಯದಲ್ಲಿ ಮತ್ತು ಸಮಾಜ ಸೇವೆಯಲ್ಲಿ ಅನೇಕ ವರ್ಷ ಸಕ್ರಿಯವಾಗಿರುವ ಅನೇಕರಿಗೆ ಮೀಸಲಾತಿಯಿಂದಾಗಿ ಆಡಳಿತದಲ್ಲಿ ಭಾಗವಹಿಸಲು ಅವಕಾಶ ಸಿಗುವುದೇ ಇಲ್ಲ.
ಇನ್ನೂ ಕೆಲವರು ತಮ್ಮ ಗ್ರಾಮ ಪಂಚಾಯಿತಿ, ನಗರಸಭೆ ಮತ್ತು ಪುರಸಭೆಗಳನ್ನು ಭದ್ರ ಕೋಟೆಯನ್ನಾಗಿ ಮಾಡಿಕೊಂಡು ಬಿಡುತ್ತಾರೆ. ಅವರು ಅಲ್ಲಿಂದ ಹೊರ ಬರುವುದೇ ಇಲ್ಲ. ಇಂತವರಿಂದ ಉತ್ತಮ ರಾಜಕೀಯ ವ್ಯವಸ್ಥೆ ಬೆಳೆಸುವಲ್ಲಿ ಮತ್ತು ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಇವರ ಪಾತ್ರ ಶೂನ್ಯವಾಗಿರುತ್ತದೆ. ಗ್ರಾಮ ಪಂಚಾಯಿತಿಯಿoದ ಜಿಲ್ಲಾ ಪಂಚಾಯತ್ ವರೆಗೆ ನಗರಸಭೆಯಿಂದ ಪಟ್ಟಣಪಂಚಾಯತ್‌ವರೆಗೆ ಎಲ್ಲಿ ಅಧಿಕಾರ ಧ್ರುವೀಕರಣವಾಗಬೇಕಿತ್ತೋ ಅಲ್ಲಿ ಕೇಂದ್ರೀಕರಣವಾಗಿದೆ. ಎಲ್ಲಿ ಅಧಿಕಾರ ವಿಕೇಂದ್ರೀಕರಣವಾಗಬೇಕಿತ್ತೋ ಅಲ್ಲಿ ಅಧಿಕಾರ ಕೆಲವರಲ್ಲಿ ಮಾತ್ರ ಕೇಂದ್ರೀಕರಣವಾಗಿದೆ.
ಇನ್ನು ಸಹಕಾರ ಕ್ಷೇತ್ರವನ್ನು ತೆಗೆದುಕೊಳ್ಳೋಣ. ಹಿಂದೆ ತಮ್ಮ ಊರಿನ ಸಹಕಾರಿಗಳು ಮುಂದಾಲೋಚನೆಯಿಂದ ನಮ್ಮ ಊರಿನ ರೈತರ ಒಳಿತಿಗಾಗಿ ಸ್ಥಾಪಿಸಿದಂತಹ ಒಂದು ಸಂಸ್ಥೆ. ಅಂದಿನಿಂದ ಇಂದಿನವರೆಗೂ ರೈತರಿಗೆ ಇದು ಸಂಜೀವಿನಿ. ರಾಷ್ಟ್ರೀಕೃತ ಬ್ಯಾಂಕ್‌ಗಳ ದಬ್ಬಾಳಿಕೆಯಿಂದ ನೊಂದ ರೈತರಿಗೆ ಸಾಂತ್ವನ ಹೇಳಿದ್ದೇ ಸಹಕಾರ ಸಂಘ. ಒಂದು ಅದು ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಆದರೆ ಈಗ ಅಲ್ಲೂ ರಾಜಕೀಯ ಪಕ್ಷಗಳ ಮತ್ತು ಮೀಸಲಾತಿಯ ಕರಿನೆರಳು ಬೀಳುತ್ತಿದೆ. ಇದರಿಂದ ಸೇವಾ ಮನೋಭಾವದ ಉತ್ತಮ ಸಹಕಾರಿಗಳು ತೆರೆಮರೆಗೆ ಸರಿಯುತ್ತಿದ್ದಾರೆ. ಇಂದು ಈ ಕ್ಷೇತ್ರದಲ್ಲೂ ಅಧಿಕಾರ ಹಿಡಿಯುವುದು ಪ್ರತಿಷ್ಠೆಯಾಗಿದೆ. ಇಲ್ಲಿ ಕೂಡ ಮೀಸಲಾತಿಯ ಕರಿಛಾಯೆ ಪ್ರಭಾವ ಬೀರಿದೆ. ಸಹಕಾರಿ ಕ್ಷೇತ್ರವು ಇಂದು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ಸಂಸ್ಥೆಯಾಗಿದೆ. ಆದ್ದರಿಂದ ಆಡಳಿತ ನಡೆಸುವವರು ಕನಿಷ್ಠ ಸಹಕಾರಿ ಕ್ಷೇತ್ರದಲ್ಲಿ ವೃತ್ತಿ ಮಾಡಿದವರು, ಅದಕ್ಕೆ ಸಂಬಂಧಪಟ್ಟ ವಿದ್ಯಾರ್ಹತೆಯನ್ನು ಹೊಂದಿದವರಿಗೆ ಮೀಸಲಾತಿ ತಂದರೆ ಆಡಳಿತ ನಡೆಸಲು ಪ್ರಯೋಜನವಾಗುತ್ತದೆ. ಕೆಲವು ಸಂಸ್ಥೆಯಲ್ಲಿ ಲಕ್ಷಕ್ಕೆ ಎಷ್ಟು ಸೊನ್ನೆ ಎಂದು ತಿಳಿಯದವರು ಮತ್ತು ಆಯ ಮತ್ತು ವ್ಯಯ ಏನೆಂದು ತಿಳಿಯದವರು ಆಯ್ಕೆಯಾಗಿ ಬರುತ್ತಾರೆ. ಇದು ಸಾಧಾರಣವಾಗಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತದೆ. ಅಂತಹವರನ್ನು ಅಥವಾ ನಿವೃತ್ತ ಬ್ಯಾಂಕ್ ಸಿಬ್ಬಂದಿಗಳನ್ನು ಮತ್ತು ಸಹಕಾರಿಗಳನ್ನು ಆಯ್ಕೆಯಾಗುವಂತೆ ಮಾಡಿದರೆ ಉತ್ತಮ.
ಇಂದು ರಾಜಕೀಯ ಕ್ಷೇತ್ರ ಬದಲಾಗಬೇಕಾದರೆ ಜಾತಿವಾರು ಮತ್ತು ಕ್ಷೇತ್ರ ಮೀಸಲಾತಿ ಬದಲಾಗಬೇಕು. ಚುನಾವಣೆಗೆ ಕನಿಷ್ಠ ವಿದ್ಯಾರ್ಹತೆ ನಿಗಧಿಪಡಿಸಬೇಕು ಮತ್ತು ವೃತ್ತಿ ನಿರತರಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಉದಾಹರಣೆಗೆ: ವೈಧ್ಯಕೀಯ, ನ್ಯಾಯಾಂಗ, ಇಂಜಿನಿಯರ್, ಕ್ರೀಡಾಪಟುಗಳು, ಪತ್ರಕರ್ತರು, ರಂಗಭೂಮಿ ಕರ್ಮಿಗಳು. ಸಹಕಾರಿಗಳು ಹೀಗೆ ಹಲವು ವೃತ್ತಿಪರರನ್ನು ಗುರುತಿಸಿ ಆಡಳಿತದಲ್ಲಿ ಅಳವಡಿಸಿಕೊಂಡರೆ ಅಭಿವೃದ್ಧಿಗೆ ಪೂರಕವಾದ ಸಲಹೆ ನೀಡಲು ಅವಕಾಶವಾಗುತ್ತದೆ. ಉದಾಹರಣೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಇದ್ದವರು ಆರೋಗ್ಯದ ವಿಷಯದಲ್ಲಿ ಸಲಹೆ ನೀಡಿದರೆ ಇಂಜಿನಿಯರ್‌ಗಳು ತಾಂತ್ರಿಕ ಸಲಹೆ ನೀಡಲು, ಪತ್ರಕರ್ತರು ಮತ್ತು ಸಾಹಿತಿಗಳು ಪ್ರಚಾರಕ್ಕೆ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ, ಕ್ರೀಡಾಪಟುಗಳು ಇದ್ದರೆ ಆ ಕ್ರೀಡಾ ಚಟುವಟಿಕೆಗಳಿಗೆ, ರಂಗಭೂಮಿ ಕರ್ಮಿಗಳಿದ್ದರೆ ಸಾಂಸ್ಕೃತಿಕ ಚಟುವಟಿಕೆಗಳಿಗೆ, ವಕೀಲರಿದ್ದರೆ ಆಡಳಿತಾತ್ಮಕ ಸಲಹೆಗಳಿಗೆ ಸೂಕ್ತ. ಹೀಗೆ ಹಲವು ಕ್ಷೇತ್ರಗಳಲ್ಲಿ ಅನುಭವಿಗಳನ್ನು ಗುರುತಿಸಿ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು. ಈ ವ್ಯವಸ್ಥೆ ಇಂದು ಜಾರಿಯಲ್ಲಿದೆ. ಸ್ಥಳೀಯ ಸಂಸ್ಥೆಗಳಿಗೆ ನಾಮಕರಣ ವ್ಯವಸ್ಥೆಯು ಜಾರಿಯಲ್ಲಿದೆ. ಅದು ಕೂಡ ರಾಜಕೀಯ ಹಿನ್ನೆಲೆಯಿಂದ ಬಂದವರಿಗೆ ಅವಕಾಶ ಕಲ್ಪಿಸುವ ವೇದಿಕೆಯಾಗಿದೆ ಹಾಗೂ ಚುನಾಯಿತ ಪ್ರತಿನಿಧಿಗಳು ನಾಮಕರಣಗೊಳಿಸಿದ ಸದಸ್ಯರಿಗೆ ಮಾತನಾಡಲು ಅವಕಾಶವೆ ನೀಡುವುದಿಲ್ಲ. ನಾವು ಗೆದ್ದು ಬಂದವರು, ನೀವು ಸುಮ್ಮನೆ ಕೂರಿ ಎಂಬ ಉದ್ಧಟತನದ ಮಾತನ್ನಡುವುದನ್ನು ಕೇಳಿದ್ದೇನೆ.
ಇದಕ್ಕೆ ಉದಾಹರಣೆ ಎಂದರೆ ವಿಧಾನ ಪರಿಷತ್ ಸ್ಥಾಪನೆ ಮಾಡಿದ ಉದ್ದೇಶ. ಉತ್ತಮ ಆಡಳಿತ ನೀಡಲು ಅದರಲ್ಲಿ ಅನುಭವಸ್ಥರ ಸಲಹೆ ಪಡೆಯಲು ಸ್ಥಾಪಿತಗೊಂಡದ್ದೇ ಈ ಮೇಲಿನ ಸಂಸ್ಥೆ ಮತ್ತು ಅದರ ಉದ್ದೇಶ. ಅಲ್ಲಿ ಎಲ್ಲಾ ಕ್ಷೇತ್ರದಲ್ಲೂ ಅನುಭವ ಹೊಂದಿದವರಿಗೆ ಅವಕಾಶ ಕಲ್ಪಿಸಲು ಮತ್ತು ಚುನಾವಣೆಯನ್ನು ಎದುರಿಸಲು ಆಗದ ಅಥವಾ ಪರಾಭವಗೊಂಡ ಉತ್ತಮ ಸಂಸದೀಯ ಪಟುಗಳ ಸೇವೆಯನ್ನು ಆಡಳಿತದಲ್ಲಿ ಪಡೆಯಲು ಅವರನ್ನು ಮೇಲ್ಮನೆಗೆ ನೇಮಿಸಿಕೊಳ್ಳುವ ಪರಿಪಾಠವಿತ್ತು. ಆದರೆ ದುರಾದೃಷ್ಟ ಇಂದು ಅದು ಜಾತಿವಾರು ನೇಮಕಕ್ಕೂ ಪಕ್ಷಕ್ಕೆ ದೇಣಿಗೆ ನೀಡುವವರಿಗೂ ಮತ್ತು ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಣ ಖರ್ಚು ಮಾಡುವವರಿಗೆ ಈ ಸ್ಥಾನವನ್ನು ನೀಡುವ ಪರಿಪಾಠ ಬೆಳೆದು ಬರುತ್ತಿದೆ. ಆದ್ದರಿಂದ ಈ ಸಂಸ್ಥೆಯ ವರ್ಚಸ್ಸು ಕಡಿಮೆಯಾಗಿದೆ. ಕೆಲವು ರಾಜ್ಯಗಳಲ್ಲಿ ಮೇಲ್ಮನೆಯನ್ನು ರದ್ದುಪಡಿಸುವ ಮಾತುಗಳು ಕೇಳಿಬರುತ್ತಿದೆ.
ಭಾರತದಲ್ಲಿ ರಾಜಕೀಯ ವ್ಯವಸ್ಥೆಯು ಪ್ರಜಾಪ್ರಭುತ್ವದಿಂದ ದೂರವಾಗಿದೆ. ಇದು ಇಂದು ಬಂಡವಾಳಶಾಹಿಗಳ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಅಧಿಕಾರವನ್ನು ಪಕ್ಷಗಳ ಸೈದ್ಧಾಂತಿಕ ಹಿನ್ನೆಲೆಯಿಂದ ಪಡೆಯಬೇಕೆ ಹೊರತು ಜಾತಿವಾರು ಪ್ರಾತಿನಿಧ್ಯತೆಯಿಂದ ಅಥವಾ ಹಣಬಲದಿಂದಲ್ಲ. ರಾಜಕೀಯ ಇಂದು ಸೇವಾಮನೋಭಾವದಿಂದ ದೂರವಾಗಿದೆ. ಕೆಲವರಿಗೆ ಇದು ಉದ್ದಿಮೆಯಾಗಿ ಪರಿವರ್ತನೆಯಾಗಿ ಬದುಕುವ ದಾರಿಯಾಗಿದೆ. ಮೊದಲೆಲ್ಲಾ ಪಕ್ಷಗಳಿಗೆ ಉದ್ದಿಮೆದಾರರು ದೇಣಿಗೆ ನೀಡುತ್ತಿದ್ದರು. ಆದರೆ ಇಂದು ರಾಜಕೀಯ ವ್ಯಕ್ತಿಗಳೇ ಉದ್ದಿಮೆದಾರರಾಗಿ ಪರಿವರ್ತನೆಗೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರ, ವಿದ್ಯಾಕ್ಷೇತ್ರ, ರಿಯಲ್ ಎಸ್ಟೇಟ್‌ಗಳ ಮೂಲವು ರಾಜಕಾರಣಿಗಳ ಹಣಗಳಿಸುವ ಮಾರ್ಗವಾಗಿದೆ. ಆದ್ದರಿಂದ ಅವರುಗಳು ರಾಜಕೀಯದಲ್ಲಿ ಉಳಿಯುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ತಮ್ಮ ವೃತ್ತಿಯನ್ನು ಉಳಿಸಿಕೊಳ್ಳುವುದು ಕಷ್ಟ. ಅದಕ್ಕಾಗಿ ಅವರು ಚುನಾವಣೆಯಲ್ಲಿ ಹಣವನ್ನು ಹೆಚ್ಚು ಖರ್ಚು ಮಾಡಿ ಎಲ್ಲಾ ರೀತಿಯ ಚದುರಂಗದಾಟವನ್ನಾಡಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ. ಈ ವ್ಯವಸ್ಥೆ ಮೊದಲು ಮೇಲ್ಮಟ್ಟದ ರಾಜಕಾರಣದಲ್ಲಿ ಮಾತ್ರ ಕಾಣುತ್ತಿತ್ತು. ಆದರೆ ಇಂದು ಇದು ತಳಮಟ್ಟಕ್ಕೂ ವಿಸ್ತರಿಸಿದೆ.
ಇಂದು ರಾಜಕೀಯ ನಿಂತ ನೀರಾಗಿದೆ. ಅದು ಶುದ್ಧೀಕರಣವಾಗಬೇಕು. ಭ್ರಷ್ಟತೆ ಸ್ವಜನ ಪಕ್ಷಪಾತ, ವಂಶಪಾರAರ‍್ಯತೆ ಈ ನಿಟ್ಟಿನಲ್ಲಿ ರಾಜಕೀಯ ಸಾಗುತ್ತಿದೆ. ಇದು ಶುದ್ಧೀಕರಣವಾಗದಿದ್ದರೆ ಈ ಹಿಂದೆ ರಾಜ ಮಹಾರಾಜರು ಆಳಿದಂತೆ ಅಧಿಕಾರ ಕೆಲವರಲ್ಲೇ ಕೇಂದ್ರೀಕೃತವಾಗುತ್ತದೆ. ಇರುವವರ ಕೈಗೆ ಆಡಳಿತ ಬಂದರೆ ಆಡಳಿತಾಂಗದಲ್ಲೂ ತಮಗೆ ಬೇಕಾದವರನ್ನು ನೇಮಿಸಿಕೊಂಡು ಆಡಳಿತ ನಡೆಸುತ್ತಾರೆ. ಅಲ್ಲಿಗೆ ಪ್ರಜಾಪ್ರಭುತ್ವದ ದುರಂತದ ನಡಿಗೆ ಆರಂಭವಾಗುತ್ತದೆ. ಆದ್ದರಿಂದ ಜನ ಎಚ್ಚೆತ್ತುಕೊಳ್ಳಬೇಕು. ಅಧಿಕಾರವಿರಲಿ ಇಲ್ಲದಿರಲಿ ಜನ ರಾಜಕೀಯದ ವಿದ್ಯಾಮಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಬೇಕು ಹಾಗೂ ರಾಜಕೀಯ ಪಕ್ಷದಲ್ಲಿ ಕೆಲಸ ಮಾಡುವಾಗ ಏನನ್ನು ನಿರೀಕ್ಷಿಸಬಾರದು. ಒಂದು ರೀತಿಯಲ್ಲಿ ದೇಶ ಸೇವೆಯೆಂದು ಭಾವಿಸಬೇಕು. ರಾಜಕೀಯ ಕ್ಷೇತ್ರದಲ್ಲಿ ಜಾತಿ, ವಂಶಪಾರಂಪರ‍್ಯತೆ, ಹಣಬಲ ಕೊನೆಗೊಂಡು ವಿದ್ಯಾವಂತರು ಬರುವಂತಾದರೆ ನಿಜವಾದ ಪ್ರಜಾಪ್ರಭುತ್ವಕ್ಕೆ ಬೆಲೆ ಬರುತ್ತದೆ.
ಕೊನೆಯ ಮಾತು : ‘ಜ್ಞಾನಿಗಳು ಮೌನವಾದರೆ ಅಜ್ಞಾನಿಗಳು ಹೇಳುವ ಸುಳ್ಳುಗಳು ಜನರಿಗೆ ವೇದವಾಕ್ಯವಾಗುತ್ತದೆ’.
(ಬಾಳೆಯಡ ಕಿಶನ್ ಪೂವಯ್ಯ)
ವಕೀಲರು ಮತ್ತು ನೋಟರಿ,
ಮಡಿಕೇರಿ.
ಮೊ.ಸಂ:9448899554, 9448809553