ಕೊಡವ ಭಾಷಿಕರ ಸಂಸ್ಕೃತಿ ಉಳಿಸಲು ಸಾಂಸ್ಕೃತಿಕ ಭವನದ ಅಗತ್ಯವಿದೆ

27/11/2021

ಮಡಿಕೇರಿ ನ.27 : ಕೊಡವ ಭಾಷಿಕರ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮತ್ತು ಪ್ರೋತ್ಸಾಹಿಸಲು ಕೊಡಗು ಜಿಲ್ಲೆಯಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸುವ ಅಗತ್ಯವಿದೆ ಎಂದು ಕೊಡವ ಭಾಷಿಕರ ಒಕ್ಕೂಟ ಅಭಿಪ್ರಾಯಪಟ್ಟಿದೆ.
ಒಕ್ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆ ಗಣಪತಿ ಅರ್ಕೆಡ್ ನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸಂಘಟನೆಯ ಬೆಳವಣಿಗೆ ಕುರಿತು ಚರ್ಚಿಸಲಾಯಿತು.
ಕೊಡವ ಭಾಷಿಕರ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಭವನದ ಅಗತ್ಯವಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಕೊಡವ ಭಾಷೆ ಮಾತನಾಡುವ ಎಲ್ಲಾ ಸಮುದಾಯಗಳ ಹಾಗೂ ಕೊಡಗಿನ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಬೇಕು ಎಂದು ಸುಭಾಷ್ ನಾಣಯ್ಯ ಮನವಿ ಮಾಡಿದರು.
ಕೊಡವ ಭಾಷಿಕರನ್ನು ಗ್ರಾಮೀಣ ಹಂತದಲ್ಲಿ ಸಂಘಟಿಸುವ ಅನಿವಾರ್ಯತೆ ಇದೆ. ಕೊಡವ ಭಾಷೆ ಮತ್ತು ಜಾನಪದ ಕಲೆಗಳ ಬೆಳವಣಿಗೆಗೆ ಕೊಡವ ಭಾಷಿಕರ ಕೊಡುಗೆ ಬಹಳಷ್ಟಿದೆ. ಯುವ ಪೀಳಿಗೆ ಕೊಡವ ಭಾಷೆಯನ್ನು ಬಳಸುವಂತೆ ಜಾಗೃತಿಗೊಳಿಸುವುದು ಮತ್ತು ಕೊಡವ ಭಾಷಿಕರ ಮಹಿಳಾ ಒಕ್ಕೂಟವನ್ನು ರಚಿಸುವ ಕುರಿತು ಸಭೆ ನಿರ್ಣಯ ಕೈಗೊಂಡಿತು.
ಒಕ್ಕೂಟದ ಉಪಾಧ್ಯಕ್ಷ ಪಡಿಞರಂಡ ಅಯ್ಯಪ್ಪ, ನಿರ್ದೇಶಕರುಗಳಾದ, ಪೊನ್ನಜೀರ ಭರತ್, ಜೊಕೀರ ಜೀವನ್, ಚೆನ್ನಪಂಡ ರಘು ಪೂಣಚ್ಚ, ಪೊಟ್ಟಂಡ ಗಣೇಶ್, ಕಣಿಯಂಡ ಪ್ರಕಾಶ್, ಮೊಳ್ಳೇಕುಟ್ಟಡ ದಿನು ಬೋಜಪ್ಪ,
ಮೇದರ ಚಂದ್ರ, ಮೇದರ ಚಿಣ್ಣಪ್ಪ, ವೇದಪಂಡ ಕಿರಣ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಕೂಡಂಡ ಸಾಬಾ ಸುಬ್ರಮಣಿ ಸ್ವಾಗತಿಸಿದರು.