ಪೊನ್ನಂಪೇಟೆ, ಕಿರುಗೂರು, ಪೊನ್ನಪ್ಪಸಂತೆ ಸಂಪರ್ಕ ರಸ್ತೆ ಅಭಿವೃದ್ಧಿ : ವಿದ್ಯುತ್ ಕಂಬಗಳ ಸ್ಥಳಾಂತರ : ಬಿರುಸುಗೊಂಡ ಕಾಮಗಾರಿ

29/11/2021

ಮಡಿಕೇರಿ ನ.29 : ಜಿಲ್ಲೆಯಲ್ಲಿ ಅಕಾಲಿಕ ಮಳೆ ಕಡಿಮೆಯಾಗಿರುವುದರಿಂದ ಪೊನ್ನಂಪೇಟೆ, ಕಿರುಗೂರು, ಪೊನ್ನಪ್ಪಸಂತೆ ಸಂಪರ್ಕ ರಸ್ತೆಯ ಕಾಮಗಾರಿ ಶೀಘ್ರ ಪುನರಾರಂಭಗೊಳ್ಳಲಿದೆ ಎಂದು ಕಿರುಗೂರು ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಚೆಪ್ಪುಡೀರ ರಾಕೇಶ್ ದೇವಯ್ಯ ತಿಳಿಸಿದ್ದಾರೆ.
ರಸ್ತೆ ಅಭಿವೃದ್ಧಿಗಾಗಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಗುಣಮಟ್ಟದ ಕಾಮಗಾರಿ ನಡೆಯುವ ಭರವಸೆ ನೀಡಿದರು.
ನಿರಂತರ ಮಳೆಯಿಂದ ಕಾಮಗಾರಿಯನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮಳೆಯ ವಾತಾವರಣ ದೂರವಾಗಿರುವುದರಿಂದ ಅಭಿವೃದ್ಧಿ ಕಾರ್ಯ ಮತ್ತೆ ಆರಂಭಗೊಳ್ಳಲಿದೆ. ಕಾಮಗಾರಿ ಸಂದರ್ಭ ಚೆಸ್ಕಾಂ ನ ಗೋಣಿಕೊಪ್ಪ ವಿಭಾಗದ ಎಇಇ ಅವರು ಅಸಹಕಾರ ತೋರುತ್ತಿದ್ದಾರೆ. ವಿದ್ಯುತ್ ಕಂಬಗಳ ಸ್ಥಳಾಂತರದ ಸಂದರ್ಭ ವಿದ್ಯುತ್ ಸರಬರಾಜು ಕಡಿತಗೊಳಿಸುವಂತೆ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ನೀಡಿಲ್ಲ. ಮೊಬೈಲ್ ಮೂಲಕ ಸಂಪರ್ಕಿಸಿದರೆ ಕರೆ ಸ್ವೀಕರಿಸುತ್ತಿಲ್ಲ, ಮರಗಳ ತೆರವು ಸಂದರ್ಭವೂ ಯಾವುದೇ ಸಹಕಾರ ನೀಡಿಲ್ಲ. ವಿರಾಜಪೇಟೆ ಶಾಸಕರು ಮೇಲಧಿಕಾರಿಗಳಿಗೆ ಸೂಚನೆ ನೀಡಿದ ನಂತರ ವಿದ್ಯುತ್ ನಿಲುಗಡೆಗೊಳಿಸಲಾಗಿದೆ ಎಂದು ರಾಕೇಶ್ ಆರೋಪಿಸಿದ್ದಾರೆ.
ಊರಿನ ಅಭಿವೃದ್ಧಿಗಾಗಿ ಪ್ರತಿಯೊಂದು ಇಲಾಖೆ ಹೊಂದಾಣಿಕೆಯಿoದ ಕಾರ್ಯ ನಿರ್ವಹಿಸುವುದರೊಂದಿಗೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ರಸ್ತೆಯ ಮುಂದುವರೆದ ಕಾಮಗಾರಿಗೆ ಹೆಚ್ಚುವರಿ 1.75 ಕೋಟಿ ರೂ.ಗಳನ್ನು ಶಾಸಕರು ಮಂಜೂರು ಮಾಡಿಸಿದ್ದಾರೆ. ರಾಜಕೀಯ ದುರುದ್ದೇಶಕ್ಕಾಗಿ ಈ ಯೋಜನೆ ಬಗ್ಗೆ ಯಾರೂ ಅಪಸ್ವರ ಎತ್ತಬಾರದು. ಅಭಿವೃದ್ಧಿ ಪರ ಚಿಂತನೆಯ ಶಾಸಕರು ಸಾಕಷ್ಟು ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ.
ಬಿಜೆಪಿ ಮಹಾಶಕ್ತಿ ಕೇಂದ್ರದ ಸಂಚಾಲಕ ಆಲೇಮಾಡ ಸುಧೀರ್, ಕಿರುಗೂರು ಬೂತ್ ಅಧ್ಯಕ್ಷ ಚೆರಿಯಪಂಡ ಕೀರ್ತನ್, ಪ್ರಮುಖರಾದ ಪೆಮ್ಮಂಡ ಮಧು, ಚೆಪ್ಪುಡೀರ ವಿವೇಕ್, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.