ಸೋಮವಾರಪೇಟೆ : ಮದ್ಯವ್ಯಸನಿಗಳು, ಪುಂಡರ ಹಾವಳಿ : ನಿವಾಸಿಗಳ ಅಸಮಾಧಾನ

02/12/2021

ಸೋಮವಾರಪೇಟೆ ಡಿ.2 : ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಬಡಾವಣೆಯಲ್ಲಿ ಪುಂಡರು ಹಾಗೂ ಮದ್ಯ ವ್ಯಸನಿಗಳ ಹಾವಳಿ ಮಿತಿ ಮೀರಿದ್ದು ಮಹಿಳೆಯರು, ಮಕ್ಕಳು ಓಡಾಡಲು ಮುಜುಗರ ಪಡುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದ್ದಾರೆ.
ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 7ರ ರೇಂಜರ್ ಬ್ಲಾಕ್ ನ ಅರಣ್ಯ ಇಲಾಖೆಯ ವಸತಿಗೃಹದ ಹಿಂಭಾಗದ ರಸ್ತೆ ಮದ್ಯ ವ್ಯಸನಿಗಳ ಆವಾಸಸ್ಥಾನವಾಗಿದೆ. ಪುಂಡರು ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಮದ್ಯಪಾನ, ಧೂಮಪಾನ ಮಾಡುವುದಲ್ಲದೆ ಮನೆಗಳ ಸಮೀಪವೇ ಅಶುಚಿತ್ವದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್ ಗಳು ಬಿದ್ದಿರುತ್ತವೆ. ಇದು ವಿದ್ಯಾರ್ಥಿಗಳಲ್ಲಿ ಕೆಟ್ಟ ಸಂದೇಶವನ್ನು ರವಾನಿಸುತ್ತಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
::: ಪೊಲೀಸರ ನಿರ್ಲಕ್ಷ್ಯ :::
ಪುಂಡರು ಹಾಗೂ ಮದ್ಯ ವ್ಯಸನಿಗಳ ವಿರುದ್ಧ ಪಟ್ಟಣ ಪಂಚಾಯ್ತಿ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಈ ಪ್ರದೇಶದಲ್ಲಿ ಬೀದಿ ದೀಪದ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಸಾರ್ವಜನಿಕವಾಗಿ ಮದ್ಯಪಾನ ಮತ್ತು ಧೂಮಪಾನ ಮಾಡುವುದು ಅಪರಾಧವಾದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ನಿವಾಸಿಗಳು ಆರೋಪಿಸಿದ್ದಾರೆ.