ತೊಂಡೂರು ಗ್ರಾಮದಲ್ಲಿ ಕಾಡಾನೆ ದಾಳಿ : ಬೆಳೆ ನಾಶ

02/12/2021

ಸುಂಟಿಕೊಪ್ಪ,ಡಿ.2: ಸುಂಟಿಕೊಪ್ಪದ ವ್ಯಾಪ್ತಿಯ ಸುತ್ತ ಮುತ್ತಲಿನ ಗ್ರಾಮದ ಕಾಫಿ ತೋಟ ಹಾಗೂ ಕೃಷಿಭೂಮಿಯಲ್ಲಿ ಕಾಡಾನೆ ದಾಳಿ ನಡೆಸಿ ಕೃಷಿ ಫಸಲುಗಳನ್ನು ತಿಂದು ನಾಶಗೊಳಿಸುತ್ತಿದ್ದು, ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ.
7ನೇ ಹೋಸಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ತೊಂಡೂರು ಗ್ರಾಮದ ಡಿ ನರಸಿಂಹ ಅವರ ತೋಟಕ್ಕೆ ನುಗ್ಗಿದ ಕಾಡಾನೆ ತೋಟದಲ್ಲಿರುವ ಕಾಫಿ, ಸಪೋಟ ಬಾಳೆ ಹಾಗೂ ಕಿತ್ತಳೆ ಫಸಲುಗಳನ್ನು ನಾಶ ಮಾಡಿ ಅಪಾರ ಪ್ರಮಾಣ ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಗುಂಪು ಬಿಡುಬಿಟ್ಟಿದ್ದು, ಹೊಸಕೋಟೆ, ಕಂಬಿಬಾಣೆ, ಗ್ರಾಮಗಳ ಸುತ್ತಮುತ್ತಲಿನ ತೋಟಗಳ ಫಸಲನ್ನು ನಾಶಪಡಿಸಿದೆ.
ಕಾಫಿ ಬೆಳೆಗಾರ ಡಿ.ನರಸಿಂಹ ಅವರು ಮಾತನಾಡಿ, ನಿರಂತರ ಮಳೆಯಿಂದ ಕಾಫಿ, ಕಾಳು ಮೆಣಸು. ಭತ್ತ ನೆಲಕಚ್ಚಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಇದೀಗ ಕಾಡಾನೆ ಹಾವಳಿಯಿಂದ ಕೃಷಿಕರು ತತ್ತರಿಸಿದ್ದಾರೆ. ಆನೆಗಳ ಹಾವಳಿ ಇದೆ ರೀತಿ ಮುಂದುವರೆದರೆ ಜೀವನ ಸಾಗಿಸುವುದಕ್ಕೂ ಕಷ್ಟ ಪಡಬೇಕಾಗುತ್ತದೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಾಡಾನೆಗಳ ಹಾವಳಿಯನ್ನು ಕೂಡಲೇ ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.