ಮಡಿಕೇರಿಯಲ್ಲಿ ಹೆಚ್ಚು ಮತಗಳನ್ನು ಪಡೆಯುವ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ : ಆರೋಪ

02/12/2021

ಮಡಿಕೇರಿ ಡಿ.2 : ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಶಾಸಕರು ಪ್ರತಿ ಚುನಾವಣೆಯಲ್ಲೂ ಅಧಿಕ ಮತಗಳನ್ನು ಪಡೆದು ಗೆಲುವು ಸಾಧಿಸುತ್ತಾರೆ. ಆದರೆ ನಗರದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲವೆoದು ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಆದರೆ ಒಂದು ದಿನವೂ ನಿಮ್ಮ ಸಮಸ್ಯೆ ಏನು ಎಂದು ಶಾಸಕರು ಕೇಳಿಲ್ಲ. ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಚುನಾವಣೆ ಸಂದರ್ಭ ಮಾತ್ರ ಬಂದು ಮತಯಾಚಿಸಿ ಹೋಗುತ್ತಾರೆಯೇ ಹೊರತು ನಗರದ ಬಗ್ಗೆ ವಿಶೇಷ ಕಾಳಜಿ ತೋರುತ್ತಿಲ್ಲವೆಂದು ಟೀಕಿಸಿದರು.
ನಗರಕ್ಕೆ ಮೂಲಭೂತ ಸೌಲಭ್ಯಗಳ ಅಗತ್ಯವಿದ್ದು, ಸೂಕ್ತ ರಸ್ತೆ, ಚರಂಡಿ, ತಡೆಗೋಡೆಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ತಮ್ಮದೇ ಸರಕಾರ ಇರುವುದರಿಂದ ಶಾಸಕರು ವಿಶೇಷ ಅನುದಾನವೆಂದು 10 ಕೋಟಿ ರೂ.ಗಳನ್ನು ತರಲಿ ಎಂದು ಒತ್ತಾಯಿಸಿದರು.
ಬಿಜೆಪಿಯನ್ನೇ ಬೆಂಬಲಿಸುತ್ತಿದ್ದ ಯುವ ಸಮೂಹ ಈಗ ಆರ್ಥಿಕ ಹಿನ್ನಡೆ, ನಿರುದ್ಯೋಗ, ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಯುವಕರು ಆಸಕ್ತಿ ತೋರುತ್ತಿದ್ದು, ಪಕ್ಷದ ಬಲ ಹೆಚ್ಚಾಗಲಿದೆ ಎಂದು ಪ್ರಕಾಶ್ ಆಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.