ಮಡಿಕೇರಿ ನಗರಸಭೆ : ಬಿಜೆಪಿಗೆ ಬಹುಮತವಿದ್ದರೂ ಕೆಲಸಗಳು ನಡೆಯುತ್ತಿಲ್ಲ : ಕಾಂಗ್ರೆಸ್ ಟೀಕೆ

02/12/2021

ಮಡಿಕೇರಿ ಡಿ.2 : ಮಡಿಕೇರಿ ನಗರಸಭೆಯಲ್ಲಿ ಜನರು ಬಿಜೆಪಿಗೆ ಬಹುಮತ ನೀಡಿದ್ದಾರೆ, ಆದರೆ ಯಾವುದೇ ಜನಪರ ಕಾರ್ಯಗಳು ಸಕಾಲದಲ್ಲಿ ನಡೆಯುತ್ತಿಲ್ಲವೆಂದು ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಉತ್ತಮ ಆಡಳಿತ ನೀಡುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳಲಿ ಎಂದು ಒತ್ತಾಯಿಸಿದರು.
ನಗರಸಭಾ ಕಚೇರಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ, ಜನಸಾಮಾನ್ಯರ ಕಡತಗಳು ವರ್ಷ ಕಳೆದರೂ ವಿಲೇವಾರಿಯಾಗುತ್ತಿಲ್ಲ. ಫಾರಂ ನಂ.3 ಗೆ ಸಂಬAಧಿಸಿದ ಅರ್ಜಿಗಳು 2- 3 ವರ್ಷಗಳಿಂದ ಹಾಗೇ ಉಳಿದಿವೆ. ಪ್ರತಿದಿನ ಅರ್ಜಿದಾರರು ನಗರಸಭೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಯಲ್ಲಿ ಯಾವುದೇ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅಧಿಕಾರಿಗಳನ್ನು ಹೇಳುವವರೂ ಇಲ್ಲ, ಕೇಳುವವರೂ ಇಲ್ಲ ಎಂಬoತ್ತಾಗಿದೆ. ಬಹುಮತ ದೊರೆತ್ತಿದ್ದರೂ ಉತ್ತಮ ಆಡಳಿತ ನೀಡುವಲ್ಲಿ ಬಿಜೆಪಿ ವಿಫಲವಾಗುತ್ತಿದೆ ಎಂದು ಆರೋಪಿಸಿದರು.
ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಮಕ್ಕಳ ಮೇಲೆ ದಾಳಿ ಮಾಡುತ್ತಿದೆ. ಪ್ರಾಣಿಗಳ ಬಗ್ಗೆ ನಮಗೂ ಕರುಣೆ ಇದೆ, ಆದರೆ ಮಕ್ಕಳ ಸುರಕ್ಷತೆಯೂ ನಮ್ಮ ಹೊಣೆಯಾಗಿದೆ. ನಾಯಿಗಳ ಉಪಟಳದ ಬಗ್ಗೆ ದೂರು ನೀಡಿದರೂ ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಡಳಿತ ವ್ಯವಸ್ಥೆಯ ವೈಫಲ್ಯತೆಯ ವಿರುದ್ಧ ವಿಧಾನ ಪರಿಷತ್ ಚುನಾವಣೆ ನಂತರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜೇಶ್ ಹೇಳಿದರು.
::: ಮಂಥರ್ ಗೌಡ ಕೊಡಗಿನ ಸುಪುತ್ರ :::
ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರು ಕೊಡಗಿನ ಸುಪುತ್ರರು ಮಾತ್ರವಲ್ಲ, ಅಳಿಯನೂ ಆಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಜಿಲ್ಲೆಯ ಮತದಾರರು ಪ್ರಜ್ಞಾವಂತರಾಗಿದ್ದು, ಮಂಥರ್ ಗೌಡ ಅವರನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಕಷ್ಟ ನೀಡುತ್ತಿರುವ ಸರಕಾರದ ಬಗ್ಗೆ ಜನರು ಅಸಮಾಧಾನಗೊಂಡಿದ್ದು, ಬದಲಾವಣೆಯನ್ನು ಬಯಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ ಎಂದು ರಾಜೇಶ್ ತಿಳಿಸಿದರು.
ಕಾಂಗ್ರೆಸ್ ಉಪಾಧ್ಯಕ್ಷ ಮುನೀರ್ ಅಹಮ್ಮದ್ ಮಾತನಾಡಿ ಬಿಜೆಪಿ ನೇತೃತ್ವದ ಸರಕಾರದ ದುರಾಡಳಿತದ ಬಗ್ಗೆ ಜನರಿಗೆ ಅರ್ಥವಾಗತೊಡಗಿದೆ. ಆಡಳಿತ ಪಕ್ಷದ ವೈಫಲ್ಯಗಳ ಬಗ್ಗೆ ಮನೆ ಮನೆಗೆ ತೆರಳಿ ಮನದಟ್ಟು ಮಾಡುವುದು ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕಾಂಗ್ರೆಸ್ ಬಲವರ್ಧನೆ ಮಾಡಲಾಗುವುದು ಎಂದರು.
ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿದ್ದ ರೈತ ಸಮೂಹವನ್ನು ಮೂದಲಿಸುವ ಪ್ರಧಾನಿ ಕ್ರಮ ಖಂಡನೀಯವೆoದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಪ್ರಮುಖರಾದ ಸದಾಮುದ್ದಪ್ಪ ಹಾಗೂ ಯಾಕುಬ್ ಉಪಸ್ಥಿತರಿದ್ದರು.