ಕೊಡಗಿನ‌ ಮೂವರು ಸಾಧಕರಿಗೆ ಪ್ರತಿಷ್ಠಿತ “ಬನವಾಸಿ‌ ಕನ್ನಡಿಗ ಪ್ರಶಸ್ತಿ”

03/12/2021

ಮಡಿಕೇರಿ ಡಿ.3 : ಕೊಡಗಿನ‌ ಮೂವರು ಸಾಧಕರು ಪ್ರತಿಷ್ಠಿತ ಬನವಾಸಿ‌ ಕನ್ನಡಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೊಡಗಿನ ಕಾವೇರಿ ತಾಲೂಕಿನ(ಕುಶಾಲನಗರ) ಕಣಿವೆ ನಿವಾಸಿ ಹಿರಿಯ ಪತ್ರಕರ್ತ, ಸಾಹಿತಿ  ಭಾರದ್ವಾಜ ಕೆ.ಆನಂದತೀರ್ಥ, ರಾಘವೇಂದ್ರ ದೇವಾಲಯ ಬಳಿಯ (ಚೈನ್ ಗೇಟ್) ನಿವಾಸಿ  ಹೆಚ್. ಆರ್. ವಿನು ಹಾಗೂ ಕೊಡಗು ಮೂಲದ ಪ್ರಸ್ತುತ ಹೊಸಪೇಟೆಯಲ್ಲಿ ವಾಸವಿರುವ  ಆರತಿ  ಪ್ರತಿಷ್ಠಿತ “ಬನವಾಸಿ‌ ಕನ್ನಡಿಗ” ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರದ್ವಾಜರು ಎಂ.ಎ ಪದವೀದರರಾಗಿದ್ದು. ಇವರ ಅವನಿ’ಗೆ(ಕವನ ಸಂಕಲನ), ನೆನಪುಗಳು ಮಾಸುವ ಮುನ್ನ(ಎಂ.ಸಿ ನಾಣಯ್ಯನವರ ಜೀವನ ಚರಿತ್ರೆಯ ನಿರೂಪಣೆ), ಕಳೆದುಕೊಂಡವರಿಗೆ(ಕಾದಂಬರಿ), ಕನವರಿಕೆಗಳು (ಲಲಿತ ಪ್ರಬಂಧಗಳ ಸಂಗ್ರಹ), ಕಂದಿಲು(ಒಂಭತ್ತು ನಿವೃತ್ತ ಶಿಕ್ಷಕರ ಜೀವನ ಪರಿಚಯ), ಕ್ರಮಣ (ಕಾದಂಬರಿ), ನೀರು ನುಗ್ಗಿದ ಮೇಲೆ(ಪ್ರಬಂಧ ಸಂಕಲನ), ಕಾನನದ ಅಂಚಿನಿಂದ(ಕಾದಂಬರಿ), ಕೊರೋನಯ್ಯ ಬಂದ್ವನಿಗೆ(ಕಾದಂಬರಿ), ಸಂದಾಯಿ (ಕಾದಂಬರಿ) ಇವಿಷ್ಟು ಈವರೆಗೆ ಪ್ರಕಟಿತ ಕೃತಿಗಳಾಗಿದೆ.
ಹಿರಿಯ ಪತ್ರಿಕೋದ್ಯಮಿಯಾಗಿದ್ದ ಇವರು ರಾಜ್ಯದ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ, ತಮ್ಮ ಸೂಕ್ಷ್ಮ ರಾಜಕೀಯ ವರದಿಗಾರಿಕೆಯಲ್ಲಿ ಸೈ ಎನಿಸಿಕೊಂಡವರು. ‘ಕೊಡಗು ಮಿತ್ರ’ ವಾರಪತ್ರಿಕೆಯ ಸಂಪಾದಕರಾಗಿದ್ದ ಇವರು ಐದು ವರ್ಷಗಳಕಾಲ ಪತ್ರಿಕೆ ಹೊರತಂದು ಇದೀಗ ತಮ್ಮ ನಿವೃತ್ತಿ ಜೀವನವನ್ನು ಕೃಷಿಯಲ್ಲಿ ಹಾಗು ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರಕೃತಿ ಪ್ರೇಮಿ ಭಾರದ್ವಾಜರು ತಮ್ಮ ಭೂಮಿಯಲ್ಲಿ ಸುಮಾರು ಆರು ಎಕರೆ(ಬಾಣೆ) ಪ್ರದೇಶವನ್ನು ಸಂಪೂರ್ಣ ಕಾಡಾಗಿಸಿ ಆ ಕಾಡನ್ನು ಕಾಡು ಪ್ರಾಣಿಗಳಿಗೆ ಎಂದು ಮೀಸಲಿಟ್ಟು ಸುದ್ದಿಯಾಗಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ ಒಳಗೊಂಡಂತೆ ಇವರಿಗೆ ಹಲವು ಪ್ರಶಸ್ತಿ ಪುರಸ್ಕಾರ ಸನ್ಮಾನಗಳು ಇವರ ಈವರೆಗಿನ ಸಾಹಿತ್ಯ ಕ್ಷೇತ್ರದ ಸಾಧನೆಗೆ ಲಭಿಸಿರುತ್ತದೆ.
ಉಳಿದಂತೆ ಕೃಷಿ, ಸಾಹಿತ್ಯ, ತಿರುಗಾಟ ಹಾಗು ಪ್ರವಾಸ ಇವರ ಹವ್ಯಾಸ.

ಹೆಚ್. ಆರ್. ವಿನು  : ಸಮಾಜ ಸೇವೆ ಕ್ಷೇತ್ರದಲ್ಲಿ ಬನವಾಸಿ‌ ಕನ್ನಡಿಗ ಪ್ರಶಸ್ತಿಗೆ ಭಾಜನರಾಗಿರುವ  ಮಡಿಕೇರಿಯ ರಾಘವೇಂದ್ರ ದೇವಾಲಯ ಬಳಿಯ (ಚೈನ್ ಗೇಟ್) ನಿವಾಸಿ ವಿನು ಹೆಚ್. ಆರ್. ವೃತ್ತಿಪರ ಟಿ.ವಿ ಹಾಗು ಎಲೆಕ್ಟ್ರಾನಿಕ್ ಮೆಕಾನಿಕ್. ಮಡಿಕೇರಿ ಕಾಲೇಜು ರಸ್ತೆಯ ಅಂಬಿಕಾ ಹೋಟೆಲ್ ಬಳಿ ಸಣ್ಣ ಗೂಡಿನಂತಹಾ ಅಂಗಡಿ‌ ಇವರದ್ದು. ಸದಾ ಸಮಾಜ ಸೇವೆಗೆ ತುಡಿಯುವ ವಿನು ಅವರದ್ದು ವಿಶಿಷ್ಟ ಹಾಗು ಆಪ್ತ ವ್ಯಕ್ತಿತ್ವ.  ಕೊಡಗು ಬ್ಲಡ್ ಡೋನರ್ಸ್ ತಂಡದ ಅಧ್ಯಕ್ಷರಾಗಿ ಎರಡು ವರ್ಷಗಳ‌ ಕಾಲ ಸೇವೆಸಲ್ಲಿಸಿರುವ ಇವರು ಪ್ರಸ್ತುತ ಕೊಡಗು ಬ್ಲಡ್ ಫೌಂಡೇಶನ್ ಸಂಸ್ಥೆಯ ರಾಜ್ಯಾಧ್ಯಕ್ಷರು. ವಿನು ಹೆಚ್.ಆರ್ ಹಾಗು ತಂಡ ಈಗಾಗಲೇ ಸಾವಿರಾರು ಕುಟುಂಬಗಳಿಗೆ ರಕ್ತದಾನದ ಮೂಲಕ ನೆರವಾಗಿದ್ದು. ಸ್ಥಳೀಯ ಅನಾಥಾಲಯ, ವೃದ್ಧಾಶ್ರಮದೊಡನೆ ನಿಕಟ ಸಂಪರ್ಕದಲ್ಲಿರುವ ಇವರು ತಮ್ಮ ಪುಟ್ಟ ತಂಡದೊಡನೆ ಕೂಡಿಕೊಂಡು ರಸ್ತೆ ಬದಿ ಕಾಣುವ ಮಾನಸಿಕ ರೋಗಿಗಳನ್ನು ಹಾಗು ಅನಾಥರನ್ನು ರಕ್ಷಿಸುವ ಕೆಲಸ ಮಾಡುತ್ತಾರೆ. ಅನಾಥ ಶವಗಳ ಅಂತ್ಯಸಂಸ್ಕಾರಕ್ಕೆ ನೆರವಾಗುತ್ತಾರೆ.
ಲಾಕ್ ಡೌನ್ ಸಂದರ್ಭ ತೀವ್ರ ಆಹಾರ ಕೊರತೆಯಿಂದ ನರಳುತ್ತಿದ್ದ ಮಡಿಕೇರಿ ನಗರದ ಸುಮಾರು ಮೂವತ್ತಕ್ಕೂ ಹೆಚ್ಚು ನಿರಾಶ್ರಿತರಿಗೆ ಸತತ ಐವತ್ತಾನಾಲ್ಕು ದಿನಗಳ ಕಾಲ ಇವರ ನೇತೃತ್ವದ ‘ಸ್ನೇಹಿತರ ಬಳಗ’ ತಂಡ ಮೂರೂ‌ ಹೊತ್ತು ಆಹಾರ ಪೂರೈಕೆ ಮಾಡಿ ಮಾನವೀಯತೆ ಮೆರೆದಿತ್ತು.

ಆರತಿ : ಕೊಡಗು ಮೂಲದ ಆರತಿ ಅವರು ಕೂಡ ಈ ಬಾರಿಯ ಬಸವಾಸಿ ಕನ್ನಡಿಗ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದು ಇವರು ಪ್ರಸ್ತುತ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ‘ಸಾಧ್ಯ’ ಎನ್ನುವ ವಿಶೇಷ ಚೇತನ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಬಸವಾಸಿಕನ್ನಡಿಗ ಪ್ರಶಸ್ತಿ ನೀಡಲಾಗುತ್ತದೆ.