ಬಾಲಕನ ಅಪಹರಣ ಯತ್ನ : ಜಮಾತ್‍ನಿಂದ ಮೂವರ ಅಮಾನತು

03/12/2021

ಮಡಿಕೇರಿ ಡಿ.3 : ನಿಧಿಗಾಗಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮುಂದಿನ ಐದು ವರ್ಷಗಳ ಕಾಲ ಜಮಾಅತ್‍ನಿಂದ ಮತ್ತು ಎಲ್ಲಾ ಅಧೀನ ಸಮಿತಿಗಳಿಂದ ಅಮಾನತು ಗೊಳಿಸಲಾಗಿದೆ ಎಂದು ಪಯನರಿ ಜಮಾಅತ್ ಮಾಜಿ ಕಾರ್ಯದರ್ಶಿ ಪಿ.ಎಂ.ಎ ಅಜೀಜ್ ಮಾಸ್ಟರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ರಾಜ್ಯದ ಮಂತ್ರವಾದಿಯೊಬ್ಬನ ಬಲೆಗೆ ಬಿದ್ದ ಕುಂಜಿಲ ವಯಕೋಲ್‍ನ ಅಶ್ರಫ್ , ವಯಕೋಲ್ ರಿಯಾಜ್ ಮತ್ತು ವಯಕೋಲ್ ಶಿಹಾಬ್ ನಿಧಿಯ ಆಸೆಗಾಗಿ ಅಪ್ರಾಪ್ತ ಬಾಲಕನನ್ನು ಬಲಿ ತೆಗೆದುಕೊಳ್ಳಲು ಅಪಹರಿಸಿ ನಿಗೂಢ ಸ್ಥಳದಲ್ಲಿರಿಸಿ ತಪ್ಪಿತಸ್ಥರಾಗಿದ್ದಾರೆ ಎಂದು ಆರೋಪಿಸಿದರು.
ಕಕ್ಕಬ್ಬೆ ಗ್ರಾ.ಪಂ ಅಧ್ಯಕ್ಷ ಕಲಿಯಂಡ ಸಂಪತ್ ಅಯ್ಯಪ್ಪ ಪಯ್‍ನರಿ ಜಮಾಅತ್ ಅಧ್ಯಕ್ಷ ಶೌಕತ್ ಆಲಿ, ಉಪಾಧ್ಯಕ್ಷ ಇಬೂ ಇವರುಗಳು ಮರಂದೋಡದಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದು, ಈ ಆರೋಪದೊಂದಿಗೆಎಮ್ಮೆಮಾಡು ಜಮಾಅತ್ ನ ಮೂವರು ಸದಸ್ಯರು ಸಹ ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರು, ಇವರ ಮೇಲೂ ಎಮ್ಮೆಮಾಡು ಜಮಾಅತ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇಂತಹವರ ವಿರುದ್ಧ ಜಿಲ್ಲೆಯ ಎಲ್ಲಾ ಜಮಾಅತ್ ಕ್ರಮ ಕೈಗೊಳ್ಳಬೇಕೆಂದರು.
ಪಯ್‍ನರಿ ಸುನ್ನಿ ಮುಸ್ಲಿಂ ಜಮಾಅತ್ ಹಿಂದಿನಿಂದಲೇ ಸರಕಾರದ ವಕ್ಫ್ ಬೋರ್ಡ್‍ನಲ್ಲಿ ರಿಜಿಸ್ಟರ್ ಮಾಡಲಾದ ಬೈಲಾ ಪ್ರಕಾರ ಆಡಳಿತ ನಡೆಸುತ್ತಿದ್ದು, ಈ ವಿಭಾಗದಲ್ಲಿ ಯಾವುದೇ ಅಹಿತಕರ ಘಟನೆ ಮತ್ತು ಮಾದಕ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡದೇ ಉತ್ತಮವಾಗಿ ಕಾರ್ಯ ನಡೆಸುತ್ತಾ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಯ್‍ನರಿ ಜಮಾಅತ್ ಅಧ್ಯಕ್ಷ ಶೌಕತ್ ಆಲಿ ಮಕ್ಕಿ, ಉಪಾಧ್ಯಕ್ಷ ಕೆ.ಎ.ಇಬ್ರಾಹಿಂ, ಪುದುರೇ ಅಹಮ್ಮದ್ ಹಾಜಿ, ವಯಕೋಲ್ ಎ.ಉಸ್ಮಾನ್ ಕುಂಡಂಡ ರಜಾಕ್, ವಯಕೋಲ್ ರಷೀದ್ ಉಪಸ್ಥಿತರಿದ್ದರು.