ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ “ನೂತನ ರಾಷ್ಟ್ರೀಯ ಶಿಕ್ಷಣ ನೀತಿ” ಕುರಿತು ಕಾರ್ಯಾಗಾರ

03/12/2021

ಮಡಿಕೇರಿ ಡಿ.3 : ಮಂಗಳೂರು ವಿಶ್ವವಿದ್ಯಾಲಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವತಿಯಿಂದ “ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020” ಕುರಿತು ಒಂದು ದಿನ ಕಾರ್ಯಾಗಾರ ನಡೆಯಿತು.
ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಶಿಕ್ಷಣ ನೀತಿಯ ನೋಡಲ್ ಅಧಿಕಾರಿ ಪ್ರೊ. ರವಿಂದ್ರಾಚಾರಿ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಐಕ್ಯುಎಸಿ ನಿರ್ದೇಶಕ ಪ್ರೊ. ಮಂಜುನಾಥ ಪಟ್ಟಾಭಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಪ್ರೊ. ರವಿಂದ್ರಾಚಾರಿ ನೂತನ ಶಿಕ್ಷಣ ನೀತಿಯ ಕುರಿತು ಮಾತನಾಡಿ, ಭಾರತೀಯ ಕೇಂದ್ರಿತ ಶಿಕ್ಷಣ ನೀತಿ ಇದಾಗಿದ್ದು, ವಿದ್ಯಾರ್ಥಿಗಳಲ್ಲಿರುವ ಕೌಶಲ್ಯವನ್ನು ವೃದ್ಧಿಸಲು ನೂತನ ಶಿಕ್ಷಣ ನೀತಿ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳ ಹಲವಾರು ವಿಷಯಗಳ ಬಗ್ಗೆ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಸಮಗ್ರ ಜ್ಞಾನ ವೃದ್ಧಿಸುವ ಸಲುವಾಗಿ ಡಿಜಿಟಲ್ ಸ್ಕಿಲ್ ಅನ್ನು ಕಲಿಕೆಯ ಭಾಗವಾಗಿ ಅಳವಡಿಸಲಾಗುತ್ತದೆ. ಈ ಕುರಿತು ಉಪನ್ಯಾಸಕರಿಗೂ ಸೂಕ್ತ ತರಬೇತಿಯನ್ನು ಶೀಘ್ರವೇ ನೀಡಲಾಗುತ್ತದೆ ಎಂದು ವಿವರಿಸಿದರು.
ಪ್ರೊ. ಮಂಜುನಾಥ ಪಟ್ಟಾಭಿಯವರು ತಾಂತ್ರಿಕ ಕಾರ್ಯಾಗಾರ ನಡೆಸಿಕೊಡುತ್ತಾ, ಪಠ್ಯ ಚಟುವಟಿಕೆಯೊಂದಿಗೆ ಯೋಗ, ಎನ್‍ಸಿಸಿ, ಎನ್‍ಎಸ್‍ಎಸ್, ಇತರ ಸಾಂಸ್ಕøತಿಕ ಚಟುವಟಿಕೆಗಳಿಗೂ ಮಹತ್ವಕೊಡಲಾಗಿರುವುದನ್ನು ವಿವರಿಸಿದರು.
ವಿದ್ಯಾರ್ಥಿಗಳ ಎಲ್ಲಾ ಚಟುವಟಿಕೆಗಳಿಗೂ ಅಂಕ ನೀಡಿ ಪ್ರೂತ್ಸಾಹಿಸುವ ಕ್ರಮವನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.
ಕಾರ್ಯಾಗಾರದಲ್ಲಿ ಉಪನ್ಯಾಸಕರುಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಲಾಯಿತು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚೌರೀರ ಜಗತ್ ತಿಮ್ಮಯ್ಯ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪೂಣಚ್ಚ ನಿರೂಪಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ರವಿ ಶಂಕರ್ ವಂದಿಸಿದರು. ಕಚೇರಿ ಸಿಬ್ಬಂದಿ ಚಂದ್ರಾವತಿ ಪ್ರಾರ್ಥಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಎನ್‍ಸಿಸಿ ಅಧಿಕಾರಿ ಮೇಜರ್ ಡಾ. ರಾಘವ ಬಿ. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ತಿಪ್ಪೇಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಲಕ್ಷ್ಮೀದೇವಿ, ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಸೇರಿದಂತೆ, ಕೊಡಗಿನ ಎಲ್ಲಾ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.