ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ : ಸರಿತಾ ಪೂಣಚ್ಚ ಅಸಮಾಧಾನ

03/12/2021

ಮಡಿಕೇರಿ ಡಿ.3 : ಹಣದ ಅಮಲು, ಅಧಿಕಾರದ ಆಸೆ, ಕೋಮುವಾದದ ಮೂಲಕ ಜನರ ದಾರಿ ತಪ್ಪಿಸುತ್ತಿರುವ ಬಿಜೆಪಿ ಸುಳ್ಳುಗಳಿಂದಲೇ ಅಧಿಕಾರ ನಡೆಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಂದ ಮತ ಕೇಳುವ ನೈತಿಕ ಹಕ್ಕು ಬಿಜೆಪಿಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಹಲವು ವರ್ಷಗಳಿಂದ ಠಿಕಾಣಿ ಹೂಡಿರುವ ಶಾಸಕರುಗಳು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಕೊಡಗಿಗೆ ವಿಶೇಷ ಯೋಜನೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆ. ಸರಕಾರ ಮಲತಾಯಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದು, ಶಾಸಕರು ಹಾಗೂ ಸಂಸದರ ನಿರ್ಲಕ್ಷ್ಯದಿಂದ ಜಿಲ್ಲೆಯ ಜನರಿಗೆ ದ್ರೋಹವಾಗಿದೆ ಎಂದು ಆರೋಪಿಸಿದ್ದಾರೆ.
ಕೊಡಗಿನ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಕೊಡುಗೆ ಏನು ಎಂಬುವುದನ್ನು ಇವರುಗಳು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಚುನಾವಣೆ ಸಂದರ್ಭ ಮಾತ್ರ ಕಣ್ಣೊರೆಸುವ ಬಿಜೆಪಿಯ ತಂತ್ರಕ್ಕೆ ಪ್ರಜ್ಞಾವಂತ ಮತದಾರರು ಮಣಿಯುವುದಿಲ್ಲ, ತಿರುಕನ ಕನಸು ಕಾಣುವುದನ್ನು ಬಿಜೆಪಿ ಮೊದಲು ಬಿಡಲಿ ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿಜೆಪಿ ಪ್ರತಿನಿಧಿ ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿರುವ ಸರಿತಾ ಪೂಣಚ್ಚ, ಕುಟುಂಬ ರಾಜಕಾರಣವನ್ನಷ್ಟೇ ಬಿಜೆಪಿ ಮಾಡುತ್ತಿದೆ. ಸೋಲಿನ ಭೀತಿಯಿಂದ ಹತಾಶಗೊಂಡು ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಾಕೃತಿಕ ವಿಕೋಪದ ಸಂತ್ರಸ್ತರು ಇಂದಿಗೂ ಸಂಕಷ್ಟದಲ್ಲಿದ್ದು, ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಬೆಳೆದ ಫಸಲು ಕಾಡುಪ್ರಾಣಿಗಳ ಪಾಲಾಗುತ್ತಿದ್ದು, ವನ್ಯಜೀವಿ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಯೋಜನೆಗಳನ್ನು ಇಲ್ಲಿಯವರೆಗೆ ರೂಪಿಸಿಲ್ಲ. ಸರಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಕಾರಣ ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಮೂವರು ಬಲಿಯಾಗಿದ್ದಾರೆ. ಹೊಟ್ಟೆಪಾಡಿಗಾಗಿ ಕೂಲಿ ಕೆಲಸವನ್ನೇ ನಂಬಿರುವ ಕಾರ್ಮಿಕರು ಕಾಡುಪ್ರಾಣಿಗಳ ಹಾವಳಿಯಿಂದ ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ರೈತರು ಮತ್ತು ಕಾರ್ಮಿಕರು ಆತಂಕದ ನಡುವೆಯೇ ಜೀವನ ಸಾಗಿಸುತ್ತಿದ್ದರೂ ಸುಳ್ಳು ಆಶ್ವಾಸನೆಗಳ ಮೂಲಕ ಗೆಲುವು ಸಾಧಿಸುತ್ತಿರುವ ಸಂಸದರು ಹಾಗೂ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜಿಲ್ಲೆಯ ಮತದಾರರು ನಿರಂತರವಾಗಿ ಶಾಸಕರುಗಳನ್ನೇ ಬೆಂಬಲಿಸುತ್ತಾ ಬರುತ್ತಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡದೆ ಕೋಮುವಾದದ ರಾಜಕಾರಣವನ್ನಷ್ಟೇ ಮಾಡುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ತರಲಿಲ್ಲ. ಕೇಂದ್ರ ಸರಕಾರದ ಮೂಲಕ ವನ್ಯಜೀವಿಗಳ ಹಾವಳಿ ತಡೆಗಟ್ಟಲು ಯೋಜನೆ ರೂಪಿಸಿಲ್ಲ. ಗಂಭೀರ ಸಮಸ್ಯೆಗಳಿದ್ದರೂ ಕೊಡಗು ಜಿಲ್ಲೆಗೆ ಬಾರದೆ ಮೈಸೂರಿಗೆ ಸೀಮಿತರಾಗಿದ್ದಾರೆ. ಕೋಮು ವಿಚಾರಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಯುವ ಸಮೂಹದ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ದುರಾಡಳಿತದಿಂದ ಪ್ರಜ್ಞಾವಂತರು ಬೇಸತ್ತಿದ್ದು, ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿದ್ದಾರೆ. ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಮಂಥರ್ ಗೌಡ ಅವರು ಪದವೀಧರರಾಗಿದ್ದು, ಉತ್ತಮ ಅಭ್ಯರ್ಥಿಯಾಗಿದ್ದಾರೆ. ಇವರ ಗೆಲುವು ನಿಶ್ಚಿತವಾಗಿದೆ ಎಂದು ಸರಿತಾ ಪೂಣಚ್ಚ ವಿಶ್ವಾಸ ವ್ಯಕ್ತಪಡಿಸಿದ್ದಾರೆ.