ಕೂಡ್ಲೂರು ಬಸವೇಶ್ವರ ಬಡಾವಣೆ : ಕಂದಾಯ ಅಧಿಕಾರಿಗಳ ಭೇಟಿ

03/12/2021

ಕುಶಾಲನಗರ ಡಿ.3 : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ಕಳೆದ ವಾರ ಸುರಿದ ಮಳೆಗೆ ಮನೆಗೋಡೆ ಕುಸಿದು ಬಿದ್ದಿದ್ದು, ಇಂದು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಬಡಾವಣೆಯ ನಿವಾಸಿ ಕೆಂಪಮ್ಮ(75) ಎಂಬುವವರಿಗೆ ಸೇರಿದ ಮನೆಗೆ ಹಾನಿಯಾಗಿದೆ. ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭ ಮಾತನಾಡಿದ ಕೆ.ಬಿ.ಶಂಶುದ್ಧೀನ್, ಎರಡು ತಿಂಗಳ ಹಿಂದೆ ಕೆಂಪಮ್ಮ ಅವರ ಮನೆ ಹಿಂಭಾಗದಲ್ಲಿದ್ದ ಬೃಹತ್ ಬಂಡೆ ಕುಸಿದಿತ್ತು. ನಂತರದ ದಿನಗಳಲ್ಲಿ ಸಣ್ಣ ಪುಟ್ಟ ಬಂಡೆಗಳು ಕುಸಿಯುತ್ತಿದ್ದಂತೆ ಮನೆಗೋಡೆಗಳು ದುರ್ಬಲವಾಗುತ್ತಿತ್ತು. ಬಸವೇಶ್ವರ ಬಡಾವಣೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಕುಟುಂಬಗಳು ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನಹರಿಸಿ ಜನರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಕ್ಷೇತ್ರದ ಶಾಸಕರು ಗಮನಹರಿಸಬೇಕು ಎಂದು ಒತ್ತಾಯಿಸಿದರು. ಮಳೆಹಾನಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಬೇಕೆಂದರು.
ಈ ಸಂದರ್ಭ ಗ್ರಾಮ ಲೆಕ್ಕಿಗ ಗುರುದರ್ಶನ್, ಸಿಬ್ಬಂದಿ ಲೋಕೇಶ್ ಮತ್ತಿತರರು ಹಾಜರಿದ್ದರು.