ಶಿವನಿಗೆ ಸಮರ್ಪಿತವಾದ ದೊಡ್ಡಬಸಪ್ಪ ದೇವಾಲಯ

04/12/2021

ದೊಡ್ಡಬಸಪ್ಪ ದೇವಸ್ಥಾನ ೧೧-೧೨ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ, ಶಿವನಿಗೆ ಸಮರ್ಪಿತವಾದ ಒಂದು ದೇಗುಲ. ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಲ್ಪಟ್ಟಿರುವ ಈ ಮಂದಿರ, ಗದಗ ಜಿಲ್ಲೆಯ, ಮುಂಡರಗಿ ತಾಲೂಕಿನ ಡಂಬಳ ಎಂಬ ಹಳ್ಳಿಯಲ್ಲಿದೆ. ಶಿವ ದೇವಾಲಯಕ್ಕೆ ಮುಖಮಾಡಿ ಕುಳಿತಿರುವ ಬೃಹತ್ ನಂದಿಯ ವಿಗ್ರಹದ ಕಾರಣದಿಂದಾಗಿ ಈ ಮಂದಿರಕ್ಕೆ ದೊಡ್ಡಬಸಪ್ಪ ದೇವಾಲಯ ಎಂದು ಹೆಸರು ಬಂದಿದೆ

ಇತಿಹಾಸ
ಡಂಬಳದ ಸುತ್ತಮುತ್ತ ಸಿಕ್ಕಿರುವ ಶಾಸನಗಳಲ್ಲಿ ಉಲ್ಲೇಖಿಸಿರುವಂತೆ ಡಂಬಳದಲ್ಲಿ ಬೌದ್ಧ, ಜೈನ ಮತ್ತು ಹಿಂದೂ ಧರ್ಮಗಳು ಅಸ್ತಿತ್ವದಲ್ಲಿ ಇತ್ತೆಂದು ಕಂಡುಬರುತ್ತದೆ. ಕ್ರಿ.ಶ. ೧೦೫೯ರ ಶಾಸನದಲ್ಲಿ ಡಂಬಳದಲ್ಲಿ ಮೊದಲೇ ಉಪಸ್ಥಿತವಿದ್ದ ಜಿನಾಲಯವೊಂದಕ್ಕೆ ಚಾಲುಕ್ಯ ದೊರೆ ಮೊದಲನೇ ಸೋಮೇಶ್ವರ ದತ್ತಿ ಕೊಟ್ಟಿರುವುದು ತಿಳಿದುಬಂದರೆ,  ೧೦೯೫ರ ಶಾಸನವೊಂದರಂತೆ ಹದಿನಾರು ಜನ ವರ್ತಕರು ಬೌದ್ಧ ದೇವತೆ ತಾರಾದೇವಿಯ ದೇಗುಲವನ್ನು ಕಟ್ಟಲು ಸಹಾಯ ಮಾಡಿರುವುದು ಗೊತ್ತಾಗುತ್ತದೆ. ಆದರೆ ಆ ದೇಗುಲವಾಗಲೀ, ಬೌದ್ಧ ವಿಹಾರವಾಗಲೀ ಅಥವಾ ಜಿನಾಲಯಗಳಾಗಲೀ ಅವುಗಳ ಅವಶೇಷವಾಗಲೀ ಇಂದು ಡಂಬಳದಲ್ಲಿ ಕಾಣಸಿಗುವುದಿಲ್ಲ[೩]. ಡಂಬಳ ಚಾಲುಕ್ಯರ ಕಾಲದಲ್ಲಿ ಮಾಸವಾಡಿನಾಡು ಎಂದು ಹೆಸರಿದ್ದ ಪ್ರದೇಶಕ್ಕೆ ರಾಜಧಾನಿಯಾಗಿತ್ತು. ಧರ್ಮಪುರ, ಧರ್ಮೋಳ, ಧರ್ಮವೊಳಲ್ ಎಂದೆಲ್ಲ ಹೆಸರು ಈ ಡಂಬಳಕ್ಕೆ ಇತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ[೪].

ದೊಡ್ಡಬಸಪ್ಪ ದೇವಾಲಯವನ್ನು ತ್ರಿಭುವನಮಲ್ಲನೆಂದು ಖ್ಯಾತಿ ಗಳಿಸಿದ್ದ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ಸೇನಾನಾಯಕನಾಗಿರಬಹುದಾದ, ರೆಬ್ಬರಸ ಮತ್ತು ಬಾವಿಕಬ್ಬೆಯರ ಮಗ ಅಜ್ಜಯಅಥವಾ ಅಜ್ಜಪ್ಪ ಈ ದೇವಾಲಯವನ್ನು ಕಟ್ಟಿಸಿದ ಎಂದು ಹೇಳಲಾಗುತ್ತದೆ. ಆದುದರಿಂದಲೇ ಈ ದೇವಾಲಯದ ಶಿವಲಿಂಗಕ್ಕೆ ಅಜ್ಜಮೇಶ್ವರ ಎಂದು ಈ ಹಿಂದೆ ಹೆಸರಿತ್ತು.

ರಚನೆ ಮತ್ತು ವಾಸ್ತುಶಿಲ್ಪ  

ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ, ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಲ್ಪಟ್ಟಿರುವ ಈ ದೊಡ್ಡಬಸಪ್ಪ ದೇವಾಲಯವು ಪೂರ್ವಕ್ಕೆ ಮುಖ ಮಾಡಿ ನಿಂತಿದ್ದು, ಪೂರ್ವ ಮತ್ತು ದಕ್ಷಿಣ ದಿಕ್ಕಿನಿಂದ ಪ್ರವೇಶಿಸುವಂತೆ ಎರಡು ದ್ವಾರಗಳನ್ನು ನಿರ್ಮಿಸಲಾಗಿದೆ. ದೇಗುಲದ ಇಡೀ ಹೊರಮೈಯನ್ನು ನಕ್ಷತ್ರವು ಆವರಿಸಿರುವಂತೆ ರಚಿಸಲಾಗಿದ್ದು ಒಟ್ಟು ೩೨ ಕೋನ(ಮುಖ)ಗಳನ್ನು ಕಾಣಬಹುದು. ಈ ದೇವಾಲಯವನ್ನು ನಿರ್ಮಿಸಲು ಬಳಪದ ಶಿಲೆಯನ್ನು ಬಳಸಲಾಗಿದೆ.

ಗರ್ಭಗೃಹ, ಅರ್ಧಮಂಟಪ, ನವರಂಗ, ಚೌಕಾಕಾರದ ಮುಖಮಂಟಪ ಮತ್ತು ಪ್ರವೇಶಮಂಟಪವನ್ನು ಹೊಂದಿದೆ. ಗರ್ಭಗುಡಿಯನ್ನು ಅದರ ಮೇಲ್ಭಾಗದಿಂದ ಶಿಖರದವರೆಗೆ ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದ್ದು ಒಟ್ಟು ೨೪ ಕೋನ(ಮುಖ)ಗಳನ್ನು ಹೊಂದಿದೆ. ನಕ್ಷತ್ರದ ೨೪ ಮುಖಗಳು ಶಿಖರದ ಕೊನೆಯಲ್ಲಿ ಸಂಧಿಸದೆ ಅರ್ಧದಲ್ಲಿಯೇ ನಿಂತಿರುವುದು ಮತ್ತು ಶಿಖರದ ಮೇಲ್ಭಾಗವು ಚಪ್ಪಟೆಯಾಗಿರುವುದು ಇದರ ವೈಶಿಷ್ಟ್ಯತೆಯಾಗಿದೆ. ಶಿಖರದ ಸುಕನಾಸದಲ್ಲಿ ಸುಂದರವಾದ ಕೀರ್ತಿಮುಖವನ್ನು ಹೊಂದಿದೆ.

ದೇವಾಲಯದ ತಳವಿನ್ಯಾಸದ ಬಗ್ಗೆ ಹೇಳುವುದಾದರೆ, ಕೆಳಗೆ ಅಧಿಷ್ಟಾನವಿದೆ, ಅಧಿಷ್ಟಾನದ ಕೆಳಗೆ ಉಪಪೀಠ, ಅದರಲ್ಲಿ ಉಪಾನ, ಜಗತಿ, ಪಟ್ಟಿಕೆ, ಕಂಪ, ಕುಮುದಗಳನ್ನು ಕಾಣಬಹುದು. ಅಧಿಷ್ಟಾನದ ಸುತ್ತಲೂ ಸಿಂಹ, ವ್ಯಾಳಿ(ಒಂದು ಕಾಲ್ಪನಿಕ ಪ್ರಾಣಿ)ಗಳ ಸಾಲನ್ನು ಕೆತ್ತಲಾಗಿದೆ. ಅರ್ಧಮಂಟಪಕ್ಕೆ ಹತ್ತಿರವಿರುವ ಕಂಬಗಳ ಮೇಲೆ ಭೈರವ, ಕಾಳಿ, ಭೈರವಿ ವರಾಹ ಮುಂತಾದ ಶಿಲ್ಪಗಳನ್ನು ಕಡೆಯಲಾಗಿದ್ದು, ಮಕರತೋರಣದ ಕಲಾಚಾತುರ್ಯ ಮೆಚ್ಚುವಂತಹುದು. ಮುಖಮಂಟಪದಲ್ಲಿರುವ ಕಕ್ಷಾಸನದ ಸುತ್ತಲೂ ವ್ಯಾಳಿಗಳನ್ನು ಸಾಲಾಗಿ ಕೆತ್ತಿಸಲಾಗಿದೆ. ವಿಶಾಲವಾದ ನವರಂಗದ ಪೂರ್ವ ಮತ್ತು ದಕ್ಷಿಣಕ್ಕೆ ದ್ವಾರಗಳಿದ್ದು, ಸೂಕ್ಷ್ಮ ಕೆತ್ತನೆಯಿಂದ ಅಲಂಕೃತಗೊಂಡ ನಾಲ್ಕು ಕಂಬಗಳಿವೆ.

ಗರ್ಭಗೃಹದಲ್ಲಿ ಎತ್ತರವಾದ ಎರಡು ಹಂತದ ಪಾಣಿಪೀಠದ ಮೇಲೆ ಶಿವನ ಸ್ವಯಂಭೂ ಲಿಂಗವಿದೆ. ಅಂತರಾಳದ ದ್ವಾರಬಂಧದ ಮೇಲೆ ಚಂದ್ರಶಿಲೆ, ದ್ವಾರಬಂಧದಲ್ಲಿ ಬಳ್ಳಿಯ ಸುರುಳಿಯ ಜೊತೆಗೆ ಯಕ್ಷರ ಶಿಲ್ಪಗಳನ್ನು ಕೆತ್ತಲಾಗಿದೆ.

ಮುಖಮಂಟಪದಲ್ಲಿ ಬೃಹತ್ ಗಾತ್ರದ ನಂದಿಯ ಏಕಶಿಲಾ ವಿಗ್ರಹವನ್ನು ಗರ್ಭಗೃಹಕ್ಕೆ ಮುಖಮಾಡಿ ಸ್ಥಾಪಿಸಲಾಗಿದ್ದು, ೫ ಅಡಿ ಎತ್ತರವಿದೆ. ಕಪ್ಪುಶಿಲಾ ನಂದಿಯ ಈ ವಿಗ್ರಹದ ಕೊರಳಲ್ಲಿ ಗಂಟೆಯನ್ನೊಳಗೊಂಡ ಸರವನ್ನು ಕೆತ್ತಲಾಗಿದೆ.

ದೇಗುಲದ ಒಟ್ಟು ವಾಸ್ತುಶಿಲ್ಪವು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ಇದ್ದರೂ ಸಹ, ಹೊಯ್ಸಳ ಶೈಲಿಗೆ ಹೆಚ್ಚು ಹತ್ತಿರವಾಗಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ತಲುಪುವ ದಾರಿ
ಗದಗವು ರಾಜ್ಯ ರಾಜಧಾನಿ ಬೆಂಗಳೂರಿನಿಂದ ೩೮೫ ಕಿ.ಮೀ., ಉಡುಪಿಯಿಂದ ೩೫೨ ಕಿ.ಮೀ, ಮಂಗಳೂರಿನಿಂದ ೪೦೫ ಕಿ.ಮೀ ದೂರದಲ್ಲಿದೆ. ರಾಜ್ಯದ ಹೆಚ್ಚಿನೆಲ್ಲಾ ಜಿಲ್ಲಾಕೇಂದ್ರಗಳಿಂದ ಗದಗಕ್ಕೆ ಸರಕಾರಿ ಬಸ್ಸಿನ ಸಂಪರ್ಕವಿದೆ. ಗದಗ ಮುಖ್ಯಕೇಂದ್ರದಿಂದ ಡಂಬಳಕ್ಕೆ ಸುಮಾರು ೨೨.೫ ಕಿ.ಮೀ ಇದ್ದು ಸಾಕಷ್ಟು ಬಸ್ಸುಗಳು ಗದಗದಿಂದ ಇಲ್ಲಿಗೆ ಬರುತ್ತವೆ.