ವಾಲ್ಮೀಕಿ ಜಾತ್ರಾ ಮಹೋತ್ಸವ : ಕೊಡಗಿನ ವಿವಿಧೆಡೆ ಜನಜಾಗೃತಿ ಸಭೆ

06/12/2021

ಮಡಿಕೇರಿ ಡಿ.6 : ವಾಲ್ಮೀಕಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜಗದ್ಗುರು ಶ್ರೀವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಕೊಡಗು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಂಘಟನಾ ಸಭೆಯ ಸಾನಿಧ್ಯ ವಹಿಸಿ ಫೆ. 8 ಮತ್ತು 9 ರಂದು ನಡೆಯುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಕುರಿತು ಜನಜಾಗೃತಿ ಸಭೆ ನಡೆಸಿದರು.

ಕುಶಾಲನಗರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಜನಸಂಖ್ಯೆಯಲ್ಲಿ ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮಾಜವಾಗಿದ್ದು, ಗ್ರಾಮ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಾದ್ಯಂತ ಸಂಘಟಿತರಾಗಿ ಸಾಂವಿಧಾನಿಕವಾಗಿ ಅಧಿಕಾರ ಮತ್ತು ಹಕ್ಕುಗಳನ್ನು ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಸಮುದಾಯ ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಸ್ಯೆಗಳ ಪರಿಹಾರ ಕೇವಲ ಸಂಘಟನೆಯಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಸಮುದಾಯದವರು ಸಂಘಟಿತರಾಗಿ ಜಾಗೃತರಾಗಬೇಕು. ಜಾತ್ರೆ ಅಂದರೆ ಜಾಗೃತಿ, ಜಾತ್ರೆಯ ಮೂಲಕ ಜಾಗೃತರಾಗಿ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕೆನ್ನುವ ಸದುದ್ದೇಶಕ್ಕಾಗಿ ಸಮುದಾಯದ ಪ್ರತಿಯೊಬ್ಬರೂ ಕಂಕಣಬದ್ಧರಾಗಿ ನಿಲ್ಲಬೇಕು ಎಂದು ತಿಳಿಸಿದರು.
ಸಭೆಯ ಹಿಂದಿನ ದಿನ ಕೂಡು ಮಂಗಳೂರು ಭಕ್ತರ ಮನೆಗೆ ಭೇಟಿ ನೀಡಿ ಸಭೆ ನಡೆಸಿದ ಶ್ರೀಗಳು, ಯುವ ಘಟಕದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಜಿಲ್ಲಾ ಸಂಘದೊಂದಿಗೆ ಸೌಹಾರ್ದಯುತ ಸಲಹೆ-ಸೂಚನೆ, ಸಹಕಾರ ದೊಂದಿಗೆ ಮುನ್ನಡೆದು ಜಾಗೃತರಾಗುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು, ಹಾಗೂ ಸಮಾಜದ ಬಂಧುಗಳು ಹಾಜರಿದ್ದರು.