ಚೆಟ್ಟಳ್ಳಿ ಗ್ರಾ.ಪಂ ಸದಸ್ಯನ ಮೇಲೆ ಗುಂಡಿನ ದಾಳಿ ಆರೋಪ : ಪ್ರಕರಣ ದಾಖಲು

06/12/2021

ಮಡಿಕೇರಿ ಡಿ.6 : ಗ್ರಾ.ಪಂ ಸದಸ್ಯನ ಮೇಲೆ ಗುಂಡು ಹಾರಿಸಿದ ಆರೋಪದಡಿ ಚೆಟ್ಟಳ್ಳಿ ಕಾಂಗ್ರೆಸ್ ವಲಯಾಧ್ಯಕ್ಷ ಪಪ್ಪು ತಿಮ್ಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಕಂಠಿ ಕಾರ್ಯಪ್ಪ ಅವರು ನೀಡಿದ ದೂರಿನ ಹಿನ್ನೆಲೆ ಪಪ್ಪು ತಿಮ್ಮಯ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಮಡಿಕೇರಿಯಲ್ಲಿ ವಿವಾಹ ಸಮಾರಂಭ ಮುಗಿಸಿ ತಾನು ಹಾಗೂ ಪತ್ನಿ ಚೆಟ್ಟಳ್ಳಿ ಕಡೆಗೆ ಪ್ರಯಾಣ ಬೆಳೆಸಿದಾಗ ಕಾರಿನಲ್ಲಿ ಬಂದ ಪಪ್ಪು ತಿಮ್ಮಯ್ಯ ಗುಂಡು ಹಾರಿಸಿದ್ದಾರೆ ಎಂದು ಕಂಠಿಕಾರ್ಯಪ್ಪ ಆರೋಪಿಸಿದ್ದಾರೆ.
ಬೈಕ್ ನ್ನು ವೇಗವಾಗಿ ಓಡಿಸಿದ ಪರಿಣಾಮ ನಾವಿಬ್ಬರು ಅಪಾಯದಿಂದ ಪಾರಾಗಿದ್ದೇವೆ ಎಂದು ತಿಳಿಸಿರುವ ಅವರು, ಕಾರಿನಲ್ಲಿದ್ದ ಉಳಿದ ಮೂವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.