ಶನಿವಾರಸಂತೆ, ಸೋಮವಾರಪೇಟೆ ರಾಜ್ಯ ಹೆದ್ದಾರಿ ಅವ್ಯವಸ್ಥೆ : ಸಾರ್ವಜನಿಕರ ಅಸಮಾಧಾನ

06/12/2021

ಸೋಮವಾರಪೇಟೆ ಡಿ.6 : ಶನಿವಾರಸಂತೆ, ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ಮೋರಿ ನಿರ್ಮಿಸಲೆಂದು ತೆಗೆದ ಗುಂಡಿಯನ್ನು ಮುಚ್ಚದೆ ಇರುವುದರಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ಕಿಬ್ಬೆಟ್ಟ ಹಾಗೂ ಕೂಗೇಕೋಡಿ ಎಂಬಲ್ಲಿ ಮೋರಿ ನಿರ್ಮಿಸಲು ರಸ್ತೆಯನ್ನು ಅಗೆಯಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡು ಒಂದೂವರೆ ತಿಂಗಳು ಕಳೆದರೂ ರಸ್ತೆಯ ಗುಂಡಿಗಳನ್ನು ಮುಚ್ಚದಿರುವ ಹಿನ್ನೆಲೆಯಲ್ಲಿ ವಾಹನ ಚಾಲಕರು ಪರದಾಡುವಂತಾಗಿದೆ.
ಮಳೆ ನೀರು ಗುಂಡಿಯಲ್ಲಿ ಸಂಗ್ರಹವಾಗುವುದರಿoದ ಮೋಟರ್ ಬೈಕ್ ಸವಾರರು ಮತ್ತು ವಾಹನ ಚಾಲಕರಿಗೆ ಸಮಸ್ಯೆಯಾಗಿದೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ. ಅಫಘಾತ ಸಂಭವಿಸುವ ಮುನ್ನಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುಂಡಿ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.