ರಸ್ತೆಗೆ ಬೇಲಿ ನಿರ್ಮಾಣ : ಸೋಮವಾರಪೇಟೆ ರೈತ ಸಂಘ ಅಸಮಾಧಾನ

06/12/2021

ಸೋಮವಾರಪೇಟೆ ಡಿ.6 : ಬಳಗುಂದ ಗ್ರಾಮದಲ್ಲಿ ಕಡಂಗ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇಲಿ ನಿರ್ಮಿಸಿರುವುದನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ತಾಲೂಕು ತಹಶಿಲ್ದಾರ್‌ಗೆ ಸೋಮವಾರ ಒತ್ತಾಯಿಸಿದರು.
ಸರ್ವೆ ಇಲಾಖೆಯ ಸೂಪರ್‌ವೈಸರ್ ಬ್ರಹ್ಮೇಶ್ ಅವರನ್ನು ಕರೆಯಿಸಿದ ತಹಶಿಲ್ದಾರ್ ಆರ್. ಗೋವಿಂದರಾಜು ಅವರು, ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಸರ್ವೆ ಮಾಡಬೇಕು. ಕಡಂಗ ಜಾಗ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ದಾಖಲೆಯನ್ವಯ ಕಡಂಗ ಜಾಗ ಒತ್ತುವರಿ ಮಾಡಿಕೊಂಡಿರುವ ಎಲ್ಲರಿಗೂ ನೋಟೀಸ್ ನೀಡಿ, ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಮುಂದಿನ 15 ದಿನಗಳ ಒಳಗೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಈ ಸಂದರ್ಭ ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಸಂಚಾಲಕ ಎಸ್.ಬಿ. ರಾಜಪ್ಪ, ಉಪಾಧ್ಯಕ್ಷ ಎ.ಆರ್. ಕುಶಾಲಪ್ಪ, ಗೌರವ ಸಲಹೆಗಾರ ಬಸವರಾಜು, ರಾಜು ಇದ್ದರು.