ಶಾಂತಳ್ಳಿ ನಾಡ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ವಿಳಂಬ : ರೈತ ಸಂಘದಿಂದ ತಹಶೀಲ್ದಾರ್ ಗೆ ದೂರು

08/12/2021

ಸೋಮವಾರಪೇಟೆ ಡಿ.8 : ಶಾಂತಳ್ಳಿ ನಾಡ ಕಚೇರಿಗೆ ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡುವಂತೆ ಸೂಚನೆ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.
ನಾಡ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದೇ ಇರುವುದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರಿನಲ್ಲಿ ಅತೀ ಹೆಚ್ಚು ಮಳೆ ಬೀಳುತ್ತದೆ. ಇದರಿಂದ ಪ್ರತಿವರ್ಷ ಫಸಲು ಹಾನಿಯಾಗುತ್ತದೆ. ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದ ಶೇ.50ಕ್ಕಿಂತ ಹೆಚ್ಚು ಕೃಷಿ ಫಸಲು ಹಾನಿಯಾಗಿದೆ. ಪರಿಹಾರಕ್ಕೆ ಅರ್ಜಿ ಕೊಡಲು ಗ್ರಾಮೀಣ ಭಾಗಗಳಿಂದ ರೈತರು ಬರಬೇಕು. ಕೆಲ ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲ. ಅಧಿಕಾರಿ ಹಾಗು ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗದ ಕಾರಣ, ರೈತರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ತಹಸೀಲ್ದಾರ್ ಗೋವಿಂದರಾಜು ಅವರಿಗೆ ಹೇಳಿದರು.
ರೈತರ ಕೆಲಸ ಕಾರ್ಯಗಳಿಗೆ ಸತಾಯಿಸದೇ ನಿಗದಿತ ಸಮಯಕ್ಕೆ ಮಾಡಿಕೊಡುವಂತೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಸಂಚಾಲಕ ಎಸ್.ಬಿ. ರಾಜಪ್ಪ, ಉಪಾಧ್ಯಕ್ಷ ಎ.ಆರ್. ಕುಶಾಲಪ್ಪ, ಗೌರವ ಸಲಹೆಗಾರ ಬಸವರಾಜು, ರಾಜು ಹಾನಗಲ್ಲು, ಬಳಗುಂದ ರವಿ ಇದ್ದರು.