ಬೆದರಿಕೆ ಮತ್ತು ಆಮಿಷ ತಂತ್ರ : ಕಾಂಗ್ರೆಸ್ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ

08/12/2021

ಮಡಿಕೇರಿ ಡಿ.8 : ವಿಧಾನ ಪರಿಷತ್ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿರುವಂತೆಯೆ ಬಿಜೆಪಿ ಬೆದರಿಕೆ ಮತ್ತು ಆಮಿಷ ತಂತ್ರವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮತದಾರರಿಗೆ ಜಿಲ್ಲಾಡಳಿತ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮತದಾನದ ಸಂದರ್ಭ ಮೊಬೈಲ್‍ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಬಾರದೆಂದು ತಿಳಿಸಿದರು.
ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಕೆಲವು ಮತದಾರರನ್ನು ಬಿಜೆಪಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ಇದೆ ಎಂದು ಆರೋಪಿಸಿದ ಅವರು, ಮತದಾನದ ದಿನ ಗಡಿ ಭಾಗದಲ್ಲಿ ತಪಾಸಣೆ ನಡೆಸಿ ಸೂಕ್ತ ಭದ್ರತೆ ನೀಡಬೇಕು. ನ್ಯಾಯ ಸಮ್ಮತ ಮತ್ತು ಮುಕ್ತ ಚುನಾವಣೆಗೆ ಕ್ರಮ ಕೈಗೊಳ್ಳಬೇಕು. ಮತದಾನ ಕೇಂದ್ರದ 100 ಮೀ. ವ್ಯಾಪ್ತಿಯೊಳಗೆ ಪ್ರಚಾರಕ್ಕೆ ಅವಕಾಶ ನೀಡಬಾರದು. ಮತದಾನ ಮಾಡುವ ಸಂದರ್ಭ ಒಬ್ಬೊಬ್ಬರನ್ನೆ ಮತಚಲಾವಣೆಗೆ ಕಳುಹಿಸಬೇಕು. ನಿರ್ಭೀತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಧರ್ಮಜ ಉತ್ತಪ್ಪ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರ ಗೆಲುವು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಪಿ.ರಮೇಶ್ ಮಾತನಾಡಿ, ಮತಕೇಂದ್ರಗಳಾಗಿ ಮಾರ್ಪಡುವ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿರುವ ಸಿಸಿ ಕ್ಯಾಮರಗಳನ್ನು ಮೊದಲು ತೆರವುಗೊಳಿಸಬೇಕು ಎಂದರು.
ಮತದಾನದ 72 ಗಂಟೆಯೊಳಗೆ ಯಾವುದೇ ನಾಯಕರು ಮತದಾನ ನಡೆಯುವ ಪ್ರದೇಶದಲ್ಲಿ ಇರಬಾರದೆಂದು ಚುನಾವಣೆ ಆಯೋಗ ಆದೇಶಿಸಿದೆ. ಜಿಲ್ಲೆಯಲ್ಲಿ ಪ್ರತಿಸ್ಪರ್ಧಿಗಳ ನಾಯಕರುಗಳು ರೆಸಾರ್ಟ್‍ನಲ್ಲಿ ತಂಗಿರುವ ಬಗ್ಗೆ ಸಂಶಯವಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
::: ಸದಸ್ಯತ್ವ ಆಂದೋಲನ :::
ಡಿ.11 ರಿಂದ ರಾಜ್ಯವ್ಯಾಪಿ ಏಕಕಾಲಕ್ಕೆ ಕಾಂಗ್ರೆಸ್ ಸದಸ್ಯತ್ವ ಆಂದೋಲನ ನಡೆಯಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಮುನೀರ್ ಅಹಮ್ಮದ್, ಕಾನೂನು ಘಟಕದ ಅಧ್ಯಕ್ಷ ಶ್ರೀಧರ್ ನಾಯರ್ ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಉಪಸ್ಥಿತರಿದ್ದರು.