ವಾಮಮಾರ್ಗದಿಂದ ಗೆಲುವು ಅಸಾಧ್ಯ : ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಪ್ರತಿಪಾದನೆ

08/12/2021

ಮಡಿಕೇರಿ ಡಿ.8 : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರು ಪ್ರಬಲ ಸ್ಪರ್ಧೆಯನ್ನು ನೀಡಿದ್ದು, ಪ್ರತಿಸ್ಪರ್ಧಿಗಳಿಗೆ ವಾಮಮಾರ್ಗದಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲವೆಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಕಲೀಲ್ ಬಾಷಾ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಮಂತರ್ ಗೌಡ ಅವರ ಬಗ್ಗೆ ಬಿಜೆಪಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು ವಾಮಮಾರ್ಗದಿಂದ ಗೆಲುವು ಸಾಧಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಅಕ್ರಮ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಬಾರದು ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಮತದಾನದ ಸಂದರ್ಭ ಮೊಬೈಲ್ ಬಳಸುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಜಿಲ್ಲೆಯಲ್ಲಿ ಶೇ.50 ರಷ್ಟು ಮಹಿಳಾ ಮತದಾರರಿದ್ದು, ಬದಲಾವಣೆಗಾಗಿ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಡಾ.ಮಂತರ್ ಗೌಡ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಲೋಪದೋಷ ರಹಿತ ಮತ್ತು ನಿರ್ಭೀತ ಚುನಾವಣೆ ನಡೆಯಲು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಗೆಲುವಿನಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆಬಲ ಬಂದಂತ್ತಾಗುತ್ತದೆ ಎಂದು ಅವರು ಹೇಳಿದರು.
ಎಸ್‍ಸಿ ಘಟಕದ ಮಡಿಕೇರಿ ನಗರಾಧ್ಯಕ್ಷ ಬಿ.ಎನ್.ಮುದ್ದುರಾಜು ಮಾತನಾಡಿ ಉತ್ಸಾಹಿ ಯುವಕ, ಸ್ನೇಹಮಯ ಜೀವಿ ಡಾ.ಮಂತರ್ ಗೌಡರ ಗೆಲುವು ನಿಶ್ಚಿತವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಯಾಕುಬ್ ಹಾಗೂ ಕಾರ್ಯದರ್ಶಿ ಮೈಕೆಲ್ ಉಪಸ್ಥಿತರಿದ್ದರು.