ಡಿ.12 ರಂದು ಕೊಟ್ಟಮುಡಿಯಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

08/12/2021

ಮಡಿಕೇರಿ ಡಿ.8 : “ಉತ್ತಮ ಸಮಾಜ ನಿರ್ಮಾಣದತ್ತ” ಎಂಬ ಧ್ಯೇಯದೊಂದಿಗೆ ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಮ್ಮತ್‍ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಿ.12 ರಂದು ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾರಿಟೇಬಲ್ ಟ್ರಸ್ಟ್‍ನ ಮಾಧ್ಯಮ ವಕ್ತಾರ ನೌಶದ್ ಜನ್ನತ್ತ್, ಇತ್ತೀಚಿನ ದಿನಗಳಲ್ಲಿ ಕೋವಿಡ್ ಪರಿಣಾಮವಾಗಿ ಜನಸಾಮಾನ್ಯರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಈ ನಡುವೆ ಅನಾರೋಗ್ಯವೂ ಕಾಡುತ್ತಿದ್ದು, ರೋಗಗಳಿಗೆ ಚಿಕಿತ್ಸೆ ಪಡೆಯಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದರು.
ಉಮ್ಮತ್‍ಒನ್ ಕೊಡಗು ಮತ್ತು ಕೊಟ್ಟಮುಡಿ ಜಮಾಅತ್ ಆಶ್ರಯದಲ್ಲಿ ಮಂಗಳೂರು ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಡಿ.12 ರಂದು ಕೊಟ್ಟಮುಡಿ ಮರ್ಕಝ್ ಹಿದಾಯದಲ್ಲಿ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಸುಮಾರು 9 ವಿವಿಧ ವಿಭಾಗಕ್ಕೆ ಸಂಬಂಧಿಸಿದ ತಜ್ಞ ವೈದ್ಯರುಗಳು ತಪಾಸಣೆ ಮಾಡಲಿದ್ದು, ಇದರ ಜೊತೆಯಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಸಾಮಾನ್ಯ ರೋಗದ ತಪಾಸಣೆÀಯೂ ನಡೆಯಲಿದೆ. ಇದೇ ದಿನ ರೆಡ್‍ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಆರೋಗ್ಯ ಜಾಗೃತಿ-ಆರೋಗ್ಯಕರ ಜೀವನ ಶೈಲಿಗಾಗಿ ತಜ್ಞರಿಂದ “ವಿಚಾರ ಮಂಥನ” ಕಾರ್ಯಕ್ರಮ ನಡೆಸಲಾಗುವುದೆಂದು ಮಾಹಿತಿ ನೀಡಿದರು.
ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು 9611554010, 6364099959, 9900233401 ನ್ನು ಸಂಪರ್ಕಿಸಬಹುದಾಗಿದೆ.
ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಉಮ್ಮತ್‍ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ಶೈಕ್ಷಣಿಕ ಮಾರ್ಗದರ್ಶನ ಶಿಬಿರ, ಉದ್ಯೋಗಮೇಳ, ವಿದ್ಯಾರ್ಥಿವೇತನ ಸಲಹಾ ಕಾರ್ಯಗಾರ, ಕೋವಿಡ್ ರೋಗಿಗಳಿಗೆ ಉಚಿತ ಆಕ್ಸಿಜನ್ ಕಾನ್ಸೆಂಟ್ರೇಟರ್‍ಗಳ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದೆ ಎಂದರು.
ಟ್ರಸ್ಟ್‍ನ ಅಧ್ಯಕ್ಷ ಎಂ.ಬಿ.ಬಶೀರ್ ಮಾತನಾಡಿ, ಶಿಬಿರ ನಡೆಯುವ ಸಂದರ್ಭ ಕೋವಿಡ್ ಲಸಿಕೆಯನ್ನು ಕೂಡ ಉಚಿತವಾಗಿ ನೀಡಲಾಗುವುದು. ಯೆನಪೋಯ ಆಸ್ಪತ್ರೆಯು ಸುಮಾರು 1 ಸಾವಿರ ಮಂದಿಗೆ ಲಸಿಕೆ ನೀಡಲು ನಿರ್ಧರಿಸಿದ್ದು, ಶಿಬಿರಾರ್ಥಿಗಳು ಇದರ ಲಾಭಪಡೆಯಬಹುದಾಗಿದೆ. ಇದೇ ಸಂದರ್ಭ ಬಿಪಿಎಲ್ ಕಾರ್ಡ್ ಹೊಂದಿರವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಾಡುವ ಪ್ರಕ್ರಿಯೆಯು ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಕೋಶಾಧಿಕಾರಿ ಸಿ.ಎಂ.ಹಮೀದ್ ಹಾಗೂ ಟ್ರಸ್ಟಿ ಮೊಹಮ್ಮದ್ ಹಾಜಿ ಉಪಸ್ಥಿತರಿದ್ದರು.