ಕಣ್ಮನ ಸೆಳೆಯುವ ನಾರಾಯಣ ದುರ್ಗ

16/12/2021

ಪ್ರವಾಸಿಗರಿಗೆ ಸುಂದರ ತಾಣವಾಗಿ, ಇತಿಹಾಸ ಪ್ರಿಯರಿಗೆ ದುರ್ಗಮ ಕೋಟೆಯಾಗಿ, ಯುವಕರು ಮತ್ತು ವಿದ್ಯಾರ್ಥಿಗಳಿಗೆ ಚಾರಣ ಸ್ಥಳವಾಗಿ ಆಕರ್ಷಿಸುವ ಈ ದುರ್ಗಮ ಬೆಟ್ಟ ಸಮುದ್ರ ಮಟ್ಟದಿಂದ 3589 ಅಡಿ ಎತ್ತರದಲ್ಲಿದೆ. ನಾಲ್ಕು ಬೆಟ್ಟಗಳಿಂದ ಆವರಿಸಿರುವ, ಕಡಿದಾದ ಕಣಿವೆಗಳು, ವಿಶಾಲವಾದ ಗುಹೆಗಳು ಮತ್ತು ಸುರಂಗಗಳಿಂದ ಹಿರಿಮೆ ಪಡೆದಿರುವ ಈ ಬೆಟ್ಟವನ್ನು ನಾರಾಯಣ ದುರ್ಗ ಎಂದೇ ಜನ ಕರೆಯುತ್ತಾರೆ.
ಕೆ.ಆರ್.ಪೇಟೆ ಪಟ್ಟಣದಿಂದ ಈಶಾನ್ಯ ದಿಕ್ಕಿನಲ್ಲಿ 10 ಕಿ.ಮೀ ದೂರದಲ್ಲಿರುವ ಈ ದುರ್ಗವು ಮೇಲುಕೋಟೆಯ ಬೆಟ್ಟದ ಶ್ರೇಣಿಯಲ್ಲಿ ಬರುವ ಬೆಟ್ಟವಾಗಿದ್ದು, ಮಾದಿಗಿತ್ತಿ ಬೆಟ್ಟ, ಮುದಿಬೆಟ್ಟ, ಹಂದಿಬೆಟ್ಟ ಸೇರಿದಂತೆ ವಿಶಾಲವಾದ ಅರಣ್ಯವನ್ನು ಒಳಗೊಂಡಿದೆ.
ಇಲ್ಲಿ ಹುಟ್ಟುವ ತೊರೆ ದೊಡ್ಡ ಹಳ್ಳವಾಗಿ ಕೆ.ಆರ್.ಪೇಟೆ ಸಮೀಪವಿರುವ ಹೊಸಹೊಳಲು ಕೆರೆಗೆ ಸೇರಿ ಅಲ್ಲಿಂದ ಕೂಡಲಕುಪ್ಪೆಯ ಬಳಿ ಹೇಮಾವತಿ ನದಿಯನ್ನು ಸೇರುತ್ತದೆ. ಅರಣ್ಯ ಇಲಾಖೆಯವರು ನಾರಾಯಣ ದುರ್ಗ ಅರಣ್ಯ ಪ್ರದೇಶವನ್ನು ‘ತೋಳಗಳ ಅಭಯಾರಣ್ಯ” ಎಂದು ಘೋಷಿಸಿದ್ದು, ಇಲ್ಲಿ ತೋಳ, ಚಿರತೆ, ನವಿಲು, ಜಿಂಕೆ ಸೇರಿದಂತೆ ಹಲವು ಜೀವವೈವಿಧ್ಯಗಳು ನೆಲೆಸಿವೆ.
ಈ ಬೆಟ್ಟದ ತಪ್ಪಲು ಪ್ರದೇಶದಲ್ಲಿ ನೂರಾರು ಬಗೆಯಲ್ಲಿ ಸಸ್ಯ ಸಂಕುಲವಿದ್ದು, ಅಮೂಲ್ಯ ಗಿಡಮೂಲಿಕೆಗಳ ತಾಣವಾಗಿದೆ. ಈ ಬೆಟ್ಟದ ಶ್ರೇಣಿ ಒಂದು ಕಾಲದಲ್ಲಿ ಸಿದ್ಧರ ಆವಾಸ ತಾಣವಾಗಿತ್ತು. ಬೆಟ್ಟದ ಬುಡದಿಂದ ಮೇಲಿನವರೆಗೂ ಸುರಂಗವಿದ್ದು, ಸಿದ್ದರು ಮೇಲಕ್ಕೆ ಹೋಗಿ ಬರಲು ಇದನ್ನು ಬಳಸುತಿದ್ದರಂತೆ. ಈಗಲೂ ಅದನ್ನು ಕಾಣಬಹುದಾದರೂ ಒಳಹೊಗುವ ದಾರಿ ಮುಚ್ಚಲ್ಪಟ್ಟಿದೆ. ಮುದಿ ಬೆಟ್ಟದಲ್ಲಿ ಹಲವಾರು ಗುಹೆಗಳಿದ್ದು, ಅವು ಶಿಲಾಯುಗದ ಸಂಸ್ಕøತಿಯನ್ನೊಂದಿವೆ ಎನ್ನಲಾಗುತ್ತದೆ.

ದೇವರಸನಿಂದ ನಿರ್ಮಿತವಾದ ಏಳುಸುತ್ತಿನ ಕೋಟೆ
ನಾರಾಯಣ ದುರ್ಗವು ವಿಜಯನಗರ ಕಾಲದಲ್ಲಿ ಪ್ರಬುದ್ಧಮಾನದಲ್ಲಿತ್ತು. ಹೊಳೆ ನರಸೀಪುರವನ್ನು ಕೇಂದ್ರವನ್ನಾಗಿಸಿಕೊಂಡು ಆಳುತಿದ್ದ ದೇವರಸ ಇಲ್ಲಿನ ಕೋಟೆ ನಿರ್ಮಿಸಿದ.
ಬೆಟ್ಟದ ಬುಡದಿಂದ ಆರು ಸುತ್ತು ಕೋಟೆ ಕಟ್ಟಿರುವುದು ವೈಶಿಷ್ಟ್ಯವಾಗಿದ್ದು, ಬಾಗಿಲುಗಳು ಒಂದಕ್ಕೊಂದು ವಿಭಿನ್ನ ಮತ್ತು ಕಲಾತ್ಮಕವಾಗಿದೆ. ಬೆಟ್ಟದ ಮೇಲ್ಗಡೆ ಸುತ್ತಲೂ ಕೋಟೆ ಇದೆ. ಕೋಟೆಯು ಏಕರೇಖೆಯಲ್ಲಿರದೆ ಅಂಕುಡೊಂಕಾಗಿದೆ. ಶತ್ರುಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಶತ್ರುಗಳು ದಾಳಿ ಮಾಡುವ ಮುನ್ಸೂಚನೆ ಸಿಕ್ಕೊಡನೆ ಸಿಂಧುಘಟ್ಟ ಸೀಮೆಯನ್ನು ಆಳುತಿದ್ದ ಪಾಳೇಗಾರರು ಧವಸ-ಧಾನ್ಯ, ಆಭರಣ ಸರಂಜಾಮುವಿನೊಂದಿಗೆ ನಾರಾಯಣ ದುರ್ಗದ ಬೆಟ್ಟದ ಮೇಲಿನ ಕೋಟೆಯಲ್ಲಿ ಆಶ್ರಯ ಪಡೆಯಲು ನಿರ್ಮಿಸಿದ್ದಲ್ಲದೆ, ಶತ್ರುಗಳು ಬೆಟ್ಟ ಏರದಂತೆ ಬೆಟ್ಟದ ಸುತ್ತ ಏಳು ಸುತ್ತಿನ ಕೋಟೆಯನ್ನು ನಿರ್ಮಿಸಿದ್ದರು.
ಈಗಲೂ ಅದರ ಕುರುಹುಗಳಾಗಿರುವ ಕೋಟೆಯ ಬಾಗಿಲುಗಳನ್ನು ಅಲ್ಲಲ್ಲಿ ಕಾಣಬಹುದು. ಪಾಳೇಗಾರರು ಎಷ್ಟು ಬುದ್ಧಿವಂತರಾಗಿದ್ದರೆಂದರೆ ಕಡಿದಾದ ಭಾಗದಲ್ಲಿ ಕೋಟೆ ನಿರ್ಮಿಸದೆ ಶತ್ರುಗಳು ಎಲ್ಲಿ ನುಸುಳಬಹುದಾಗಿತ್ತೋ ಅಲ್ಲಿ ಏಳು ಕೋಟೆಗಳನ್ನು ನಿರ್ಮಿಸಿದ್ದಾರೆ. ಬೆಟ್ಟದ ತುಟ್ಟ ತುದಿಯಲ್ಲಿ ಕೊನೆಯ ಕೋಟೆ ಇದ್ದು, ಇಲ್ಲಿ ಮದ್ದಿನ ಮನೆಯನ್ನೂ ಕಾಣಬಹುದು. ಒಂದು ಬಾಗಿಲಿನಿಂದ ಶತ್ರುಗಳು ಬಂದರೂ, ಮತ್ತೊಂದರಲ್ಲಿ ಸಿಕ್ಕಿಕೊಳ್ಳುತಿದ್ದರು. ಅಲ್ಲದೆ ಶತ್ರುಗಳು ಬೆಟ್ಟ ಏರಲು ಆಗದಂತೆ ಎಣ್ಣೆಯನ್ನು ಸುರಿಯುತಿದ್ದಕ್ಕೆ ಇಲ್ಲಿ ಗುರುತುಗಳನ್ನು ಕಾಣಬಹುದು. ದೇವರಸ ಎಂಬ ಪಾಳೇಗಾರನ ಕಾಲದಲ್ಲಿ ಇಲ್ಲಿ ಕೋಟೆ, ಮದ್ದಿನ ಮನೆ, ದೇವಸ್ಥಾನಗಳು ನಿರ್ಮಿತವಾದವು. ಶತ್ರುಗಳು ಬೆಟ್ಟದ ಮೇಲೆ ಬಾರದಂತೆ ತಡೆಗಟ್ಟುವುದೇ ಇದರ ಉದ್ದೇಶವಾಗಿತ್ತು ಎನ್ನುತ್ತಾರೆ ಇತಿಹಾಸಕಾರರಾದ ತೈಲೂರು ವೆಂಕಟಕೃಷ್ಣ ಅವರು.

ಲಿಂಗಸ್ವರೂಪಿ ಕೈವಲ್ಯೇಶ್ವರನೇ ಕಾವಲುಗಾರ:

ಬೆಟ್ಟದ ತುದಿ ತಲುಪಿದಾಗ ಎದುರಾಗುವ ಲಿಂಗಸ್ವರೂಪಿ ಕೈವಲೇಶ್ವರನೇ ಇಲ್ಲಿಯ ಕಾವಲುಗಾರ. ಹಿಂದೆ ಇಲ್ಲಿ ಆಳೆತ್ತರದ ನಾರಾಯಣನ ಭವ್ಯ ಸ್ವರೂಪದ ವಿಗ್ರಹವಿದ್ದಿತಂತೆ. ಹಾಗಾಗಿ ನಾರಾಯಣ ದುರ್ಗಾ ಎಂದು ಕರೆಯುತಿದ್ದರು.
ಕಾಲಘಟ್ಟದಲ್ಲಿ ಆ ವಿಗ್ರಹವನ್ನು ಇಲ್ಲಿಂದ ಕದ್ದೊಯ್ಯಲಾಯಿತಂತೆ. ಆ ನಂತರ ಅಲ್ಲಿ ಸ್ಥಳೀಯರು ಐದು ಅಡಿ ಎತ್ತರದ ಲಿಂಗವನ್ನು ಪ್ರತಿಷ್ಠಾಪಿಸಿ ಕೈವಲೇಶ್ವರ ಎಂದು ಕರೆದರಂತೆ. ದೇವಸ್ಥಾನವೂ ಶಿಥಿಲಾವಸ್ಥೆಯಲ್ಲಿದ್ದು, ದ್ರಾವಿಡ ವಾಸ್ತುಶಿಲ್ಪವನ್ನೊಂದಿದ್ದು, ವಿಜಯನಗರ ಕಾಲದ್ದೆಂದು ಗುರುತಿಸಲಾಗಿದೆ.

ಭಯ ಹುಟ್ಟಿಸುವ ವಕ್ಕರಿಸಿದ ಕಲ್ಲು:
ದೇವಸ್ಥಾನದ ಹಿಂಭಾಗದಲ್ಲಿ ವಕ್ಕರಿಸಿದ ಕಲ್ಲು ಇದ್ದು, ಇದು ಭೂಮಿಗೆ ಚಾಚಿಕೊಂಡಿದೆ. ತಪ್ಪು ಮಾಡಿದ್ದವರನ್ನು ಇಲ್ಲಿಂದ ತಳ್ಳಿ ಮರಣದಂಡನೆಗೆ ಒಳ ಪಡಿಸಲಾಗುತ್ತಿತ್ತಂತೆ. ಹಾಗಾಗಿ ಇದನ್ನು ಹದ್ದಿನ ಕಲ್ಲು ಎನ್ನುತ್ತಾರೆ. ಇಲ್ಲಿಂದ ಜಾರಿ ಬಿದ್ದರೆ ದೇಹ ಸಿಕ್ಕರೂ ಪ್ರಾಣವಂತೂ ಉಳಿಯುವುದಿಲ್ಲ. ಹಿಂದೆ ಮರಣ ದಂಡನೆಗೆ ಒಳಗಾದವರನ್ನು ಇಲ್ಲಿಗೆ ಕರೆತಂದು ಬೆಟ್ಟದಿಂದ ತಳ್ಳಿ ಬಿಡುತಿದ್ದರಂತೆ. ಈಗಲೂ ಅದನ್ನು ನೋಡುವುದಕ್ಕೆ ಭಯ ಹುಟ್ಟಿಸುವ ರೀತಿಯಲ್ಲಿಯೇ ಇದೆ. ನಾರಾಯಣ ದುರ್ಗದ ಸಮೀಪ ಸಿಂಧುಘಟ್ಟ ಗ್ರಾಮವಿದ್ದು, ಸಿಂಧುಘಟ್ಟದ ಕೆರೆ ನಾರಾಯಣ ದುರ್ಗದ ಬೆಟ್ಟಕ್ಕೆ ಭೂಷಣದಂತಿದೆ. ಹೊಯ್ಸಳರ ಕಾಲದಲ್ಲಿ ಸಿಂಧುಘಟ್ಟವು ಸೀಮೆಯಾಗಿ ಆಡಳಿತ ಕೇಂದ್ರವಾಗಿತ್ತು. ಹೊಯ್ಸಳರ ಕಾಲದ ಅನೇಕ ಹಾಗಾಗಿ ಇಲ್ಲಿ ದೇವಾಲಯಗಳು ಹೆಸರುವಾಸಿಯಾಗಿವೆ.

ಚಾರಣಿಗರಿಗೆ ಮೆಚ್ಚಿನ ತಾಣ:

ನಾರಾಯಣ ದುರ್ಗ ಬೆಟ್ಟವನ್ನು ಹತ್ತುವುದು ತ್ರಾಸದಾಯಕವಾದುದು. ಆದರೆ ಹತ್ತಿದ ನಂತರ ಸಿಗುವ ಆನಂದ ವರ್ಣಿಸಲು ಅಸದಳ. ಬೆಟ್ಟದ ತುದಿಯಿಂದ ಮೇಲುಕೋಟೆ, ಚಾಮುಂಡಿ ಬೆಟ್ಟ, ಕನ್ನಂಬಾಡಿ ಜಲಾಶಯ, ಆದಿಚುಂಚನಗಿರಿ ಬೆಟ್ಟಗಳನ್ನು ಕಾಣಬಹುದು. ಬೆಟ್ಟದ ಕೆಳಗಿನ ಹಸಿರು ದೃಶ್ಯ ನಯನ ಮನೋಹರವಾಗಿದ್ದು, ಕೆರೆ-ತೋಟ ಮತ್ತು ಗ್ರಾಮಗಳು ಆಕರ್ಷಿಸುತ್ತವೆ.

ಜೀವನದಲ್ಲಿ ಒಮ್ಮೆಯಾದರೂ ನಾರಾಯಣ ದುರ್ಗದ ಬೆಟ್ಟವನ್ನು ಹತ್ತಿ ಇಳಿಯಬೇಕು. ಆಗಲೇ ಬೆಟ್ಟ ಹತ್ತಿದ ಅನುಭವ ನಮ್ಮದಾಗುವುದು. ಬೆಟ್ಟವನ್ನು ಹತ್ತುವಾಗ ಏದುಸಿರು ಬಿಡುವಂತ್ತಾಗುತ್ತದೆ, ಇಳಿಯುವಾಗ ಜೀವ ಕೈಯಲ್ಲಿಡಿದುಕೊಂಡು ಇಳಿಯಬೇಕು. ಆಯಾ ತಪ್ಪಿದರೆ ನಾರಾಯಣನೇ ರಕ್ಷಿಸಬೇಕು!

ಪಾಂಡವರು ಇಲ್ಲಿಗೆ ಬಂದಿದ್ದರು :
ಈ ಬೆಟ್ಟದ ಪೌರಾಣಿಕ ಹಿನ್ನೆಲೆ ರಾಮಾಯಣ – ಮಹಾಭಾರತದ ಕಾಲದಷ್ಟು ಹಿಂದಿನದು. ಪಾಂಡವರು ಇಲ್ಲಿ ತಂಗಿದ್ದರು ಎಂದು ಸ್ಥಳ ಪುರಾಣ ಹೇಳುತ್ತದೆ. ಪಾಂಡವರು ವನವಾಸದ ಸಂದರ್ಭದಲ್ಲಿ ಇಲ್ಲಿ ತಂಗಿದ್ದಾಗ, ನೀರಿಗಾಗಿ ಭೀಮ ತನ್ನ ತೊಡೆಯನ್ನು ತಿರುವಿ ನೀರು ಬರುವಂತೆ ಮಾಡಿದನೆಂದು ಇದನ್ನು ಭೀಮ ತಿರುವಿನ ಹೊಂಡ ಎನ್ನುತ್ತಾರೆ. ಅಷ್ಟೇ ಅಲ್ಲ ತ್ರೇತಾಯುಗದಲ್ಲಿ ಇಲ್ಲಿಗೆ ರಾಮ, ಸೀತೆ, ಲಕ್ಷ್ಮಣ ಬಂದಿದ್ದು, ಅವರು ಕುಳಿತು ಊಟ ಮಾಡಿದ ಸ್ಥಳವಿದ್ದು, ವಿಶಾಲ ಬಂಡೆಯ ಮೇಲೆ ಇವುಗಳನ್ನು ಕಾಣಬಹುದಾಗಿದೆ.

ಇಲ್ಲಿಗೆ ಹೇಗೆ ಬರುವುದು:

ಅಂದ ಹಾಗೇ ಇಲ್ಲಿಗೆ ಬರಲು ಬೆಂಗಳೂರು-ಮಂಡ್ಯದಿಂದ ಬರುವವರು ಮೇಲುಕೋಟೆ ಮಾರ್ಗವಾಗಿ ಬಂದು ರಾಯಸಮುದ್ರ ಗೇಟ್ ಬಳಿ ಇಳಿದು ನಾಲ್ಕು ಕಿಲೋ ಮೀಟರ್ ನಡೆದು ಹೋಗಬೇಕು. ಮೈಸೂರು ಕಡೆಯಿಂದ ಬರುವವರು ಕೆ.ಆರ್.ಪೇಟೆಗೆ ಬಂದು ಮೇಲುಕೋಟೆ ರಸ್ತೆಯಲ್ಲಿ 10 ಕಿಲೋ ಮೀಟರ್ ಸಾಗಿದರೆ ಈ ಸ್ಥಳವನ್ನು ತಲುಪಬಹುದಾಗಿದೆ. ರಾಯಸಮುದ್ರದ ತಪ್ಪಲಲ್ಲಿ ಗ್ರಾಮದವರು ಈಚೆಗೆ ಜೀರ್ಣೋದ್ಧಾರ ಮಾಡಿದ ಚೌಡೇಶ್ವರ ದೇಗುಲವಿದ್ದು, ಇದರಿಂದ ಬೆಟ್ಟ ಹತ್ತುವವರಿಗೆ ಮತ್ತು ಇಳಿದು ಬರುವವರಿಗೆ ಮಾರ್ಗದರ್ಶನ ಸಿಗುತ್ತದೆ. ಪ್ರತಿ ವರ್ಷ ಶ್ರಾವಣ, ಕಾರ್ತಿಕ ಮಾಸ, ಮಹಾಶಿವರಾತ್ರಿ ಸಂದರ್ಭದಲ್ಲಿ ಗ್ರಾಮಸ್ಥರು ಕುಟುಂಬ ಸಮೇತ ಬೆಟ್ಟ ಹತ್ತಿ ಹರಕೆ ತೀರಿಸಿಕೊಂಡು ಬರುತ್ತಾರೆ. ಕಣ್ಮನ ಸೆಳೆಯುವ ನಾರಾಯಣ ದುರ್ಗವು ನಮ್ಮ ಐತಿಹಾಸಿಕ ಹಾಗೂ ಪೌರಾಣಿಕ ಘಟನೆಗಳ ಸಾಕ್ಷಿ ಪ್ರಜ್ಞೆಯಂತೆ ಕಂಗೊಳಿಸುತ್ತಾ ನಿಂತಿದೆ.

ಬರಹ : ಬಲ್ಲೇನಹಳ್ಳಿ ಮಂಜುನಾಥ್
ಕೃಪೆ : ಜನಪದ