ಮೆಂತ್ಯೆಕಾಳಿನ ಔಷಧೀಯ ಗುಣಗಳು

23/12/2021

ಭಾರತೀಯ ಅಡುಗೆಯಲ್ಲಿ ಹೆಚ್ಚಾಗಿ ಬಳಸಲ್ಪಡುವಂತಹ ಪ್ರಮುಖ ಸಾಂಬಾರ ಪದಾರ್ಥಗಳಲ್ಲಿ ಒಂದಾಗಿರುವಂತಹ ಮೆಂತ್ಯೆ ಕಾಳಿನಲ್ಲಿ ಹಲವಾರು ಬಗೆಯ ಔಷಧೀಯ ಗುಣಗಳು ಮಾತ್ರವಲ್ಲದೆ, ಸೌಂಧರ್ಯವರ್ಧಕ ಗುಣಗಳು ಕೂಡ ಇವೆ. ಮೆಂತ್ಯೆಕಾಳನ್ನು ಬಳಸಿಕೊಂಡು ಕೂದಲು ಉದುರುವಿಕೆ, ತಲೆಹೊಟ್ಟು ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.

ಮೆಂತ್ಯೆ ಕಾಳು ತ್ವಚೆಯ ಹಲವಾರು ಸಮಸ್ಯೆಗಳನ್ನು ನಿವಾರಿಸುವುದು. ಇದರಲ್ಲಿ ಡಿಯೊಸ್ಗೆನಿನ್ ಎನ್ನುವ ಈಸ್ಟ್ರೋಜನ್ ನಂತಹ ಅಂಶವಿದ್ದು, ಇದು ಕೂದಲು ಮತ್ತು ಚರ್ಮಕ್ಕೆ ಲಾಭಕಾರಿ. ಇದರಲ್ಲಿ ಪ್ರೋಟೀನ್, ವಿಟಮಿನ್ ಸಿ, ಕಬ್ಬಿಣಾಂಶ, ನಾರಿನಾಂಶ ಇತ್ಯಾದಿಗಳು ಇವೆ.

ತಲೆಹೊಟ್ಟು ನಿವಾರಣೆ : ತಲೆಹೊಟ್ಟು ನಿವಾರಣೆ ಮಾಡಲು ಮೆಂತ್ಯೆ ಕಾಳಿನ ಪೇಸ್ಟ್ ನ್ನು ಈ ರೀತಿಯಲ್ಲಿ ಮಾಡಿ.
ರಾತ್ರಿ ನೀರಿಗೆ ಸ್ವಲ್ಪ ಮೆಂತ್ಯೆ ಕಾಳುಗಳನ್ನು ನೆನೆಯಲು ಹಾಕಿ ಮತ್ತು ಬೆಳಗ್ಗೆ ಇದರ ಪೇಸ್ಟ್ ಮಾಡಿಕೊಳ್ಳಿ.
ಈಗ ಇದನ್ನು ತಲೆಬುರಡೆಗೆ ಹಚ್ಚಿಕೊಂಡು ಕೆಲವು ಗಂಟೆಗಳ ಕಾಲ ಹಾಗೆ ಬಿಡಿ.
ಇದರ ಬಳಿಕ ಶಿಖಾಕಾಯಿ ಹಾಕಿಕೊಂಡು ಕೂದಲು ತೊಳೆಯಿರಿ.

ಸಾಸಿವೆ ಎಣ್ಣೆಗೆ ಸ್ವಲ್ಪ ಮದರಂಗಿ ಎಲೆಗಳನ್ನು ಹಾಕಿಕೊಂಡು ಬಿಸಿ ಮಾಡಿ ಮತ್ತು ಇದರ ಬಳಿಕ ಸೋಸಿಕೊಳ್ಳಿ.
ಇದು ತಣ್ಣಗಾದ ಬಳಿಕ ಮೆಂತ್ಯೆ ಪೇಸ್ಟ್ ನ್ನು ಎಣ್ಣಿಗೆ ಹಾಕಿ ಮತ್ತು ಕೂದಲಿಗೆ ಹಾಗೆ ಹಚ್ಚಿಕೊಳ್ಳಿ. ಇದನ್ನು ಅರ್ಧ ಗಂಟೆ ಕಾಲ ಹಾಗೆ ಬಿಡಿ. ಇದರ ಬಳಿಕ ಕೂದಲು ತೊಳೆಯಿರಿ.

ತಲೆಬುರುಡೆಯಲ್ಲಿ ತುರಿಕೆ ಕಡಿಮೆ ಮಾಡಿ
ಮೆಂತ್ಯೆಯನ್ನು ಬಳಸಿಕೊಂಡು ತಲೆಬುರುಡೆಯಲ್ಲಿನ ತುರಿಕೆ ಮತ್ತು ಸಣ್ಣ ಹುಣ್ಣುಗಳನ್ನು ದೂರ ಮಾಡಬಹುದು. ಇದನ್ನು ಬಳಸುವ ಕ್ರಮ ಹೀಗಿದೆ.
ರಾತ್ರಿ ನೀರಿನಲ್ಲಿ ಸ್ವಲ್ಪ ಮೆಂತ್ಯೆ ಕಾಳನ್ನು ನೆನೆಯಲು ಹಾಕಿ. ಬೆಳಗ್ಗೆ ಎದ್ದು ಆ ನೀರನ್ನು ಸೋಸಿಕೊಳ್ಳಿ ಮತ್ತು ಇದರಿಂದ ಕೂದಲನ್ನು ತೊಳೆಯಿರಿ.
ಮೆಂತ್ಯೆ ಕಾಳಿನ ಜತೆಗೆ ಬೇರೆ ಸಾಮಗ್ರಿಗಳನ್ನು ಬಳಸಿಕೊಂಡು ತುರಿಕೆ ಕಡಿಮೆ ಮಾಡಬಹುದು.

​ಕೂದಲು ಉದುರುವಿಕೆಗೆ 

ಕೂದಲು ಉದುರುವಿಕೆ ಎನ್ನುವುದು ತುಂಬಾ ಕಿರಿಕಿರಿ ಮಾತ್ರವಲ್ಲದೆ, ಇದರಿಂದ ಆತ್ಮವಿಶ್ವಾಸವೇ ಕುಸಿದು ಹೋಗುವುದು. ಇದಕ್ಕಾಗಿ ಮೆಂತ್ಯೆ ಪೇಸ್ಟ್ ಮತ್ತು ಮೊಸರನ್ನು ಬಳಸಿ.
ಸ್ವಲ್ಪ ಮೆಂತ್ಯೆ ಕಾಳನ್ನು ರುಬ್ಬಿಕೊಂಡು ಬಳಿಕ ಮೊಸರಿನ ಜತೆಗೆ ಮಿಶ್ರಣ ಮಾಡಿ. ಇದನ್ನು ಹಾಗೆ ತಲೆಬುರುಡೆಗೆ ಹಚ್ಚಿ.
30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ಕೂದಲನ್ನು ಶಾಂಪೂ ಹಾಕಿ ತೊಳೆಯಿರಿ.

ಮೊಡವೆ ಕಲೆ ನಿವಾರಣೆಗೆ
ಮೊಡವೆ ಹೋದರೂ ಅದರ ಕಲೆಯು ಮುಖದಲ್ಲಿ ಹಾಗೆ ಇರುವುದು ಮತ್ತು ಇದು ಸೌಂಧರ್ಯಕ್ಕೆ ಹಾನಿ ಉಂಟು ಮಾಡುವುದು. ಇದನ್ನು ನಿವಾರಣೆ ಮಾಡಲು ಮೆಂತ್ಯೆ ಫೇಸ್ ಪ್ಯಾಕ್ ಬಳಸಿ.
ಮೆಂತ್ಯೆ ಕಾಳುಗಳನ್ನು 15 ನಿಮಿಷ ಕಾಲ ಕುದಿಯುವ ನೀರಿಗೆ ಹಾಕಿ. ಇದರ ಬಳಿಕ ತಣ್ಣಗಾಗಲು ಬಿಡಿ.
ಈಗ ನೀರನ್ನು ಸೋಸಿಕೊಂಡು ಅದನ್ನು ಹತ್ತಿ ಉಂಡೆಯ ಮೂಲಕ ಮೊಡವೆ ಕಲೆಗಳು ಇರುವ ಜಾಗಕ್ಕೆ ಹಚ್ಚಿ.
ಒಂದು ವಾರ ಕಾಲ ಇದನ್ನು ಮಾಡಿದರೆ ಅದು ಪರಿಣಾಮಕಾರಿ.

ಸುಟ್ಟ ಕಲೆ ದೂರವಾಗಿಸಲು 

ಸುಟ್ಟ ಗಾಯದ ಕಲೆಗಳುಕೂಡ ಹಠಮಾರಿಯಂತೆ ಹಾಗೆ ಉಳಿಯುವುದು. ಇದನ್ನು ತೆಗೆಯಲು ಹೀಗೆ ಮಾಡಿ.
ರಾತ್ರಿ ಮೆಂತ್ಯೆ ಕಾಳಗಳನ್ನು ನೀರಿಗೆ ಹಾಕಿ ನೆನೆಸಿ ಮತ್ತು ಬೆಳಗ್ಗೆ ಪೇಸ್ಟ್ ಮಾಡಿ.
ಇದನ್ನು ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಅದು ಹಾಗೆ ಒಣಗಲಿ.
ಈಗ ನೀರಿನಿಂದ ಮುಖ ತೊಳೆಯಿರಿ ಮತ್ತು ಇದನ್ನು ನಿಯಮಿತವಾಗಿ ಮುಂದುವರಿಸಿ.

ಮೊಡವೆ ನಿವಾರಿಸಲು 

ಮೆಂತ್ಯೆ ಕಾಳು ಮೊಡವೆ ನಿವಾರಣೆ ಮಾಡುವುದು ಮಾತ್ರವಲ್ಲದೆ, ಬ್ಲ್ಯಾಕ್ ಹೆಡ್ ನ್ನು ನಿವಾರಿಸುವುದು. ಇದಕ್ಕಾಗಿ ಮೆಂತ್ಯೆ ಕಾಳು ಮತ್ತು ಎಲೆಗಳು ಅಗತ್ಯವಾಗಿ ಬೇಕು.
ಇವುಗಳನ್ನು ಜತೆಯಾಗಿ ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು ಪೇಸ್ಟ್ ಮಾಡಿ.
ರಾತ್ರಿ ವೇಳೆ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಬೆಳಗ್ಗೆ ಎದ್ದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಯಾವಾಗಲೂ ಮೊಡವೆ ಬೀಳುತ್ತಲಿದ್ದರೆ ಆಗ ನೀವು ಇದನ್ನು ನಿಯಮಿತವಾಗಿ ಬಳಕೆ ಮಾಡಿ.
ಮನೆಮದ್ದುಗಳು ಫಲಿತಾಂಶ ನೀಡಲು ಸ್ವಲ್ಪ ಸಮಯ ಬೇಕಾಗುವುದು. ಹೀಗಾಗಿ ಒಂದು ಸಲ ಬಳಸಿ ನಿಲ್ಲಿಸಿದರೆ ಅದರಿಂದ ಯಾವುದೇ ಪ್ರಯೋಜನವಾಗದು.

ಚರ್ಮದ ಶುದ್ಧೀಕರಣಕ್ಕೆ 

ಮೆಂತ್ಯದಲ್ಲಿ ಇರುವ ಪೋಷಕಾಂಶ ಗುಣವು ಚರ್ಮವನ್ನು ಶುದ್ಧಗೊಳಿಸುತ್ತದೆ. ಇದು ಚರ್ಮದ ಆಳಕ್ಕೆ ಇಳಿದು ಆರೈಕೆ ಹಾಗೂ ಶುದ್ಧೀಕರಣಕ್ಕೆ ಸಹಾಯ ಮಾಡುವುದು.

ಮೆಂತ್ಯ ಬೀಜವು ಚರ್ಮಕ್ಕೆ ಪುನರ್ ಚೈತನ್ಯ ನೀಡುವ ಶಕ್ತಿಯನ್ನು ಪಡೆದುಕೊಂಡಿದೆ. ಹಾಗಾಗಿ ಇದನ್ನು ಚರ್ಮ ಸುಕ್ಕುಗಟ್ಟುವಿಕೆಯ ಸಮಸ್ಯೆಗೆ ಪರಿಹಾರವಾಗಿ ಬಳಸಬಹುದು.