ಮಾಧ್ಯಮ ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ

12/01/2022

ಮಡಿಕೇರಿ ಜ.12 :  ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಸ್ನಾತಕೋತ್ತರ ಪದವೀಧರ ಪತ್ರಿಕೋದ್ಯಮ ಅಭ್ಯರ್ಥಿಗಳಿಗೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವೃತ್ತಿಪರ ತರಬೇತಿಗೆ (2021-22ನೇ) ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯ 2021-22ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿಯಲ್ಲಿ (ಎಸ್.ಸಿ.ಪಿ./ ಟಿ.ಎಸ್.ಪಿ) ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಿಗೆ ವೃತ್ತಿಯಲ್ಲಿ ಉತ್ತಮ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ತಿಂಗಳ ಅಪ್ರೆಂಟಿಸ್ ತರಬೇತಿ ಹಮ್ಮಿಕೊಂಡಿದೆ.
ವಿಶೇಷ ಘಟಕ ಯೋಜನೆ (ಪರಿಶಿಷ್ಟ ಜಾತಿ) 22 ಮಂದಿ ಹಾಗೂ ಗಿರಿಜನ ಉಪ ಯೋಜನೆಯಡಿ (ಪರಿಶಿಷ್ಟ ಪಂಗಡ) 08 ಮಂದಿ ಅಭ್ಯರ್ಥಿಗಳನ್ನು ಗರಿಷ್ಠ ಅಂಕಗಳ ಆಧಾರದ ಮೇಲೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರಿಕಾಲಯಗಳಲ್ಲಿ ತರಬೇತಿ ನೀಡಿ ಮಾಹೆಯಾನ ರೂ. 15,000 ಗಳ ಸ್ಟೈಫಂಡ್ ನೀಡಲಾಗುವುದು.
ಅಭ್ಯರ್ಥಿಯು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನ್ನಡ ಭಾಷೆಯಲ್ಲಿ ಪರಿಣಿತರಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 40 ವರ್ಷದೊಳಗಿರಬೇಕು.
ಅರ್ಜಿಯೊಂದಿಗೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಪದವಿ ಹಾಗೂ ಸ್ನಾತಕೋತ್ತರ ಪ್ರಮಾಣ ಪತ್ರಗಳೊಂದಿಗೆ ಜಾತಿ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಇನ್ನಿತರೆ ಪೂರಕ ದಾಖಲೆಗಳನ್ನು ಪಿಡಿಎಫ್‍ನಲ್ಲಿ ಸ್ಕ್ಯಾನ್ ಮಾಡಿ ಇ-ಮೇಲ್ ವಿಳಾಸ  traineekma2022@gmail.com  ಮೂಲಕ ಅಥವಾ ಅಂಚೆ ಮೂಲಕ ಜನವರಿ 27 ರೊಳಗೆ ತಲುಪುವಂತೆ ಕಳುಹಿಸಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆ/ ಸಂಸ್ಥೆಗಳಲ್ಲಿ ಫಲಾನುಭವಿಗಳಾಗಿದ್ದರೆ ಅಂತಹವರು ಅರ್ಜಿ ಸಲ್ಲಿಸುವಂತಿಲ್ಲ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-22860164 ಕಾರ್ಯದರ್ಶಿಗಳು, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೆÇೀಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ರೂಪ ಅವರು ತಿಳಿಸಿದ್ದಾರೆ.