ಕೊಡಗಿನ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಶ್ರೀ ಗೋಪಾಲಕೃಷ್ಣ ದೇವಾಲಯ

13/01/2022

ಶ್ರೀ ಗೋಪಾಲಕೃಷ್ಣ ದೇವಾಲಯ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಎಂಬಲ್ಲಿದೆ.

ಕೊಡಗು ಜಿಲ್ಲೆಯಲ್ಲಿ ಶ್ರೀ ಕೃಷ್ಣದೇವಾಲಯಗಳು ಅತ್ಯಂತ ವಿರಳ. ಅದರಲ್ಲೂ ಪುರಾತನ ಐತಿಹಾಸಿಕ ಕೃಷ್ಣದೇವಾಲಯ ಇದು ಒಂದು. ದೇವಾಲಯದ ಪುನಃನಿರ್ಮಾಣ ಸಂದರ್ಭದಲ್ಲಿ ದೊರಕಿದ ಎರಡು ತಾಮ್ರದ ನಾಣ್ಯಗಳ ಪ್ರಕಾರ ಈ ದೇವಾಲಯವು ಕರ್ನಾಟಕವನ್ನು ದೀರ್ಘಕಾಲ ಆಳಿದ ಗಂಗರಾಜರ ಕಾಲದಲ್ಲಿ ನಿರ್ಮಿಸಿರಬಹುದೆಂದು ಊಹಿಸಲಾಗಿದೆ. ಆ ಕಾಲದ ಸಾಮಂತರಾಜರ ನೆಲೆ ಇದಾಗಿತ್ತೆಂದು, ಇಲ್ಲಿ ಆಡಳಿತ ಕಛೇರಿಯೂ ಹಲವಾರು ವರ್ಷ ನಡೆಯುತ್ತಿತ್ತೆಂದೂ ಪ್ರತೀತಿ ಇದೆ. ದೇವಾಲಯದ ಹತ್ತಿರ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಗದ್ದೆಗಳಿಗೆ “ಕಛೇರಿ ಕಂಡಿ”- (ಕಛೇರಿ ಬಾಗಿಲು) ಇತ್ಯಾದಿ ಹೆಸರುಗಳಿವೆ.

ಅರಸರ ಕಾಲದಲ್ಲಿ, ಪೂರ್ವಿಕರ ಕಾಲದಲ್ಲಿ ಇದೊಂದು ನ್ಯಾಯಸ್ಥಾನವಾಗಿ ಕಾರ್ಯನಿರ್ವಹಿಸುತ್ತಿತ್ತೆಂದೂ ಸಾಕ್ಷಿಯಾಗಿ ದೇವಾಲಯ ಪೂರ್ವ ದಿಕ್ಕಿನಲ್ಲಿ ಹೆಬ್ಬಂಡೆಯೊಂದಿದೆ. ಇದನ್ನು “ಸತ್ಯಪ್ರಮಾಣ ಕಲ್ಲು” ಎಂದು ಇಂದಿಗೂ ಕರೆಯಲಾಗುತ್ತಿದೆ. ಅಪರಾಧ ಮಾಡಿದ ವ್ಯಕ್ತಿಯು ಪೂರ್ವ ಭಾಗದಲ್ಲಿ ಹರಿಯುವ ನದಿಯಲ್ಲಿ ಮಿಂದು ಬಂದು ದೇವರ ಎದುರು ನಿಂತು ಸತ್ಯಪ್ರಮಾಣ ಕಲ್ಲನ್ನು ಮುಟ್ಟಿ ತಾನು ನಿರಪರಾಧಿ ಎಂದು ಘೋಷಿಸಬೇಕಿತ್ತು. ಒಂದೊಮ್ಮೆ ವ್ಯಕ್ತಿ ಅಪರಾಧವೆಸಗಿದ್ದರೆ ಆ ಸತ್ಯಪ್ರಮಾಣ ಕಲ್ಲನ್ನು ಮುಟ್ಟಿ ಪ್ರಮಾಣಿಸುವ ಧೈರ್ಯವನ್ನು ಮಾಡುತ್ತಿರಲಿಲ್ಲ.

ಇಲ್ಲಿ ಬಂದು ಶ್ರದ್ಧಾ-ಭಕ್ತಿಯಿಂದ ದೇವರನ್ನು ಸ್ತುತಿಸಿ ಪ್ರಾರ್ಥನೆ ಸಲ್ಲಿಸಿದರೆ ಭಕ್ತಾದಿಗಳ ಮನದ ಆಸೆಯನ್ನು ಪೂರ್ಣವಾಗಿ ನೆರವೇರಿಸಿದ ಉದಾಹರಣೆಗಳಿವೆ. ಈ ದೇವಾಲಯವು ‘ಬೇಂದ್ರೆ ನಾಡಿನ ಕೇಂದ್ರ ಸ್ಥಾನ’ ಎಂದು ಪ್ರಸಿದ್ಧ. ಹುತ್ರಿಹಬ್ಬ ಆಚರಣೆಯ ಸಂದರ್ಭದಲ್ಲಿ ಈ ದೇವಾಲಯದ ಪರಿಸರದಲ್ಲಿ ಸುಮಾರು ಐದು ವಿವಿಧ ಗ್ರಾಮದ ಜನರು ಸೇರುತ್ತಾರೆ.

ಈ ದೇವಾಲಯವು ಕೊಡಗು ಜಿಲ್ಲೆಯ ಮಡಿಕೇರಿಯಿಂದ ತಲಕಾವೇರಿ ಪುಣ್ಯಕ್ಷೇತ್ರಕ್ಕೆ ಸಾಗುವ ಮುಖ್ಯ ಮಾರ್ಗದಲ್ಲಿ ಸುಮಾರು 20 ಕಿಮೀ ಕ್ರಮಿಸಿದಾಗ ಮಾರ್ಗದ ಬಲ ಮಗ್ಗುಲಲ್ಲಿ ಶ್ರೀ ಗೋಪಾಲಕೃಷ್ಣ ದೇವಾಲಯಕ್ಕೆ ಹೋಗುವ ಮುಖ್ಯ ದ್ವಾರವೊಂದು ಚೇರಂಬಾಣೆ ಎಂಬ ಗ್ರಾಮದಲ್ಲಿ ಗೋಚರಿಸುತ್ತದೆ.