ನಿಶಾನೆಮೊಟ್ಟೆ ಹರಳು ಕಲ್ಲು ದಂಧೆ : ಇಬ್ಬರು ಅರಣ್ಯ ಸಿಬ್ಬಂದಿಗಳ ಅಮಾನತು : ತನಿಖೆ ಚುರುಕು

13/01/2022

ಮಡಿಕೇರಿ ಜ.13 : ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ವಲಯದ ತೊಡಿಕಾನ ಉಪ ವಲಯದ ತಣ್ಣಿಮಾನಿ ಬಳಿಯ ತಾವೂರು ಗ್ರಾಮದ ನಿಶಾನೆಮೊಟ್ಟೆ ಬೆಟ್ಟದ ತಪ್ಪಲಿನಲ್ಲಿ ನಡೆದ ಅಕ್ರಮ ಹರಳು ಕಲ್ಲು ದಂಧೆ ಪ್ರಕರಣಕ್ಕೆ ಸಂಬoಧಿಸಿದoತೆ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕರ್ತವ್ಯಲೋಪದ ಆರೋಪದಡಿ ತೊಡಿಕಾನ ಉಪವಲಯದ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಎಸ್.ಮೂರ್ತಿ ಹಾಗೂ ಅರಣ್ಯ ರಕ್ಷಕ ಸಚಿನ್ ಪೋಲಾರ್ ಎಂಬುವವರನ್ನು ಅಮಾನತಿನಲ್ಲಿಡಲಾಗಿದೆ.
ಉಳಿದ ಸಿಬ್ಬಂದಿಗಳನ್ನು ಬೇರೆ ಕಡೆಗಳಿಗೆ ನಿಯೋಜಿಸಲು ಭಾಗಮಂಡಲ ವಲಯ ಅರಣ್ಯಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ. ಅಮಾನತುಗೊಂಡ ಅಧಿಕಾರಿಗಳ ಸ್ಥಾನಕ್ಕೆ ಶ್ರೀಧರ್ ಹಾಗೂ ರಫೀಕ್ ಅವರುಗಳನ್ನು ನೇಮಿಸಲಾಗಿದೆ.
ಅಕ್ರಮ ಗಣಿಗಾರಿಕೆ ನಡೆದ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯoಡ ರವಿಕುಶಾಲಪ್ಪ ಸೂಚನೆ ನೀಡಿದ ಹಿನ್ನೆಲೆ ಉಪ ಸಂರಕ್ಷಣಾಧಿಕಾರಿ ಅಜ್ಜಿಕುಟ್ಟಿರ ಪೂವಯ್ಯ ಅವರು ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.
ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಗಳ ಶೆಡ್ ಗಳಿದ್ದ ಸ್ವಲ್ಪ ದೂರದಲ್ಲೇ ಸುರಂಗಗಳನ್ನು ಕೊರೆದು ಕೆಂಪು ಹರಳು ಕಲ್ಲುಗಳನ್ನು ದೋಚುತ್ತಿದ್ದ ಪ್ರಕರಣ ಕಳೆದ ವಾರವಷ್ಟೇ ಬೆಳಕಿಗೆ ಬಂದಿತ್ತು. ಅಕ್ರಮ ದಂಧೆ ವಿರುದ್ಧ ತನಿಖೆ ಮುಂದುವರೆದಿದ್ದು, ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.