ಮಡಿಕೇರಿ : ವೇತನಕ್ಕಾಗಿ ಬ್ಯಾಂಕ್ ಮಿತ್ರರ ಸಂಘ ಒತ್ತಾಯ

13/01/2022

ಮಡಿಕೇರಿ ಜ.13 : ಬ್ಯಾಂಕ್ ಮಿತ್ರರಿಗೆ ನಿಗದಿತ ವೇತನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬ್ಯಾಂಕ್ ಮಿತ್ರರ ಸಂಘ ಕೊಡಗು ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸಂಘದ ಉಪಾಧ್ಯಕ್ಷ ವೀರಾಭದ್ರ ಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ಗೆ ಮನವಿ ಸಲ್ಲಿಸಿದ ಬ್ಯಾಂಕ್ ಮಿತ್ರರು, ರಾಷ್ಟ್ರೀಕೃತ ಬ್ಯಾಂಕ್ ಗಳ ಬ್ಯಾಂಕ್ ಮಿತ್ರರಿಗೆ ಖಾಸಗಿ ಕಂಪನಿ ವೇತನ ಕೊಡದೇ ವಂಚಿಸುತ್ತಿದೆ ಎಂದು ಆರೋಪಿಸಿದರು.
ಕಳೆದ ಹಲವು ವರ್ಷಗಳಿಂದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಬ್ಯಾಂಕ್ ಮಿತ್ರರು ಬ್ಯಾಂಕ್ ನ ಕ್ಲರ್ಕ್ ಗಳಿಗಿಂತಲೂ ಹೆಚ್ಚಿನ ಕೆಲಸ ಮಾಡುತ್ತಾ ಬಂದಿದ್ದೇವೆ. ಬ್ಯಾಂಕ್ ನ ಪ್ರತಿಯೊಂದು ಸೌಲಭ್ಯಗಳನ್ನು ಗ್ರಾಹಕರು ಇರುವ ಗ್ರಾಮ ಅಥವಾ ಸ್ಥಳಗಳಲ್ಲಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಹಳ್ಳಿಗಳಲ್ಲಿ ಫಲಾನುಭವಿಗಳನ್ನು ಭೇಟಿಯಾಗಿ ಸೌಲಭ್ಯಗಳ ಮಾಹಿತಿ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.
ಅಲ್ಲದೇ ಕಳೆದ ಎರಡು ವರ್ಷಗಳ ಕೊರೊನಾ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಮೆಟ್ರಿಕ್ ಬಳಸಿ ಜನರಿಗೆ ಅವರವರ ಮನೆಗಳಲ್ಲಿ ಸೇವೆಗಳನ್ನು ನೀಡಿದ್ದೇವೆ. ಆದರೆ, ಬ್ಯಾಂಕ್ ಗಳಿಂದ ನೇಮಕವಾದ ಖಾಸಗಿ ಕಂಪನಿಗಳು ನಮಗೆ ಸರಿಯಾದ ವೇತನ ಕೊಡದೇ ವಂಚಿಸುತ್ತಿವೆ ಎಂದು ದೂರಿದರು.
ಕೋವಿಡ್ ಲಾಕ್‌ಡೌನ್, ಬೆಲೆ ಏರಿಕೆಯಿಂದಾಗಿ ಬ್ಯಾಂಕ್ ಮಿತ್ರರು ಪರದಾಡುವಂತಾಗಿದ್ದು, ಆದರೂ ಖಾಸಗಿ ಕಂಪನಿಗಳು ನಮ್ಮ ಸಂಬಳವನ್ನು ಹೆಚ್ಚು ಮಾಡುವ ಬದಲು ಕಡಿಮೆ ಮಾಡುತ್ತಿವೆ. ಆದ್ದರಿಂದ ಬ್ಯಾಂಕ್ ಮಿತ್ರರಿಗೆ ನಿಗದಿತ ವೇತನ ನೀಡಬೇಕು. ಒಂದು ಲಕ್ಷಕ್ಕೆ 500 ರೂ. ಕಮಿಷನ್ ನೀಡಬೇಕು, ಭವಿಷ್ಯನಿಧಿ ಹಾಗೂ ವೈದ್ಯಕೀಯ ಸೌಲಭ್ಯ ದೊರಕಿಸಿ ಕೊಡಬೇಕು, ಕುಟುಂಬದ ಸುರಕ್ಷತೆಗಾಗಿ ಜೀವ ವಿಮೆಯನ್ನು ನೀಡಬೇಕು, ಬ್ಯಾಂಕ್‌ನಿoದ ಸಾಲ ಸೌಲಭ್ಯ ದೊರಕುವಂತೆ ಮಾಡಿಕೊಡಬೇಕು, ಬ್ಯಾಂಕಿಗೂ ಮತ್ತು ಯಾವುದೇ ಕಂಪನಿಗೂ ಒಡಬಂಡಿಕೆ ಮಾಡಿಕೊಳ್ಳದೆ ನೇರವಾಗಿ ಬ್ಯಾಂಕ್‌ಗಳು ಬ್ಯಾಂಕ್ ಮಿತ್ರರನ್ನು ನೇಮಿಸಿಕೊಳ್ಳಬೇಕು, ಯಾವುದೇ ಭದ್ರತಾ ಠೇವಣಿಗಳನ್ನು ತೆಗೆದುಕೊಳ್ಳಬಾರದು, ಹಿಂದೆ ನೀಡುತ್ತಿದ್ದ ಕಂಪನಿಗಳಿoದ ಗೌರವಧನ ಮತ್ತು ಕಮಿಷನ್ ಅನ್ನು ಕೊಡಬೇಕೆಂದು ಆಗ್ರಹಿಸಿದರು.

ಬ್ಯಾಂಕ್ ಮಿತ್ರರಾದ ಕುಮಾರ್, ಶ್ರೀಕಾಂತ್, ಭವ್ಯ ಮತ್ತಿತರರು ಮನವಿ ನೀಡುವ ಸಂದರ್ಭ ಹಾಜರಿದ್ದರು.