ಕಾಫಿ ತೋಟದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಬ್ರಿಟೀಷರ ಕಾಲದ ಬೆಳ್ಳಿ ನಾಣ್ಯಗಳು ಪತ್ತೆ : ಓರ್ವನ ಬಂಧನ

14/01/2022

ಮಡಿಕೇರಿ ಜ.14 : ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬ್ರಿಟೀಷರ ಕಾಲದ ಬೆಳ್ಳಿಯ ನಾಣ್ಯಗಳು ಸಕಲೇಶಪುರ ತಾಲ್ಲೂಕಿನ ಹಾಲೇಬೇಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಲಭಿಸಿದೆ.
ಒಟ್ಟು 28 ನಾಣ್ಯಗಳನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು, ವಿಷಯವನ್ನು ಗುಟ್ಟಾಗಿಟ್ಟಿದ್ದ ಕಾರ್ಮಿಕ ಹರೀಶ್ ಎಂಬಾತನನ್ನು ಬಂಧಿಸಿದ್ದಾರೆ.
ಶ್ಯಾo ಎಂಬುವವರಿಗೆ ಸೇರಿದ ತೋಟದಲ್ಲಿ ಹರೀಶ್ ಮತ್ತಿತರರು ಕೆಲಸ ನಿರ್ವಹಿಸುತ್ತಿದ್ದಾಗ ಬೆಳ್ಳಿಯ ನಾಣ್ಯಗಳು ದೊರೆತ್ತಿವೆ. ಈ ವಿಚಾರವನ್ನು ಮಾಲೀಕರಿಗೆ ತಿಳಿಸದೆ ನಾಣ್ಯಗಳನ್ನು ಹರೀಶನೇ ಇಟ್ಟುಕೊಂಡಿದ್ದ ಎಂದು ಆರೋಪಿಸಲಾಗಿದೆ. ತೋಟದಲ್ಲಿ ನಿಧಿ ಸಿಕ್ಕಿದೆ ಎಂದು ಊರಿನಲ್ಲೆಲ್ಲಾ ವಿಷಯ ತಿಳಿದಾಗ ತೋಟದ ಮಾಲೀಕ ಶ್ಯಾಂ ಕಾರ್ಮಿಕ ಹರೀಶನ ಬಳಿ ವಿಚಾರಿಸಿದ್ದಾರೆ. ಈ ಸಂದರ್ಭ ತಪ್ಪೊಪ್ಪಿಕೊಂಡ ಆರೋಪಿ ನನಗೆ 9 ನಾಣ್ಯಗಳು ಮಾತ್ರ ಸಿಕ್ಕಿದೆ ಎಂದು ಮಾಲೀಕರಿಗೆ ನೀಡಿದ್ದಾನೆ. ಇವುಗಳನ್ನು ಪೊಲೀಸರಿಗೆ ಒಪ್ಪಿಸಿದ ಶ್ಯಾಂ ನಡೆದಿರುವ ಪ್ರಕರಣವನ್ನು ವಿವರಿಸಿದ್ದಾರೆ. ಪೊಲೀಸರು ಹರೀಶ್ ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದರು. ಈ ಸಂದರ್ಭ ಹರೀಶ್ ತನ್ನ ಮನೆಯ ಹಿಂಭಾಗದಲ್ಲಿರಿಸಿದ್ದ ಉಳಿದ 19 ನಾಣ್ಯಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.
ಒಟ್ಟು 28 ನಾಣ್ಯಗಳು ಕೋಟ್ಯಾಂತರ ರೂ. ಬೆಲೆ ಬಾಳುತ್ತವೆ ಎಂದು ಹೇಳಲಾಗಿದೆ.