ಲೈನ್ ಮನೆಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕಾರ್ಮಿಕರ ಕಷ್ಟ ಅರಿಯಲಿ

14/01/2022

ಮಡಿಕೇರಿ ಜ.14 : ಕೊಡಗಿನ ಲೈನ್‍ಮನೆಗಳಲ್ಲಿ ವಾಸವಿರುವ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ನಿವೇಶನ ಹಾಗೂ ಹಕ್ಕುಪತ್ರ ನೀಡಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಲೈನ್‍ಮನೆಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕಾರ್ಮಿಕರ ಕಷ್ಟ ಅರಿಯಬೇಕು ಎಂದು ಬುಡಕಟ್ಟು ಕಾರ್ಮಿಕರ ಸಂಘ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಶೈಲೇಂದ್ರ ಹಾಗೂ ಹಾತೂರು ಘಟಕದ ಉಪಾಧ್ಯಕ್ಷೆ ಬಿ.ಕೆ.ರಾಣಿ ಇತ್ತೀಚಿಗೆ ಜಿಲ್ಲಾಡಳಿತ ನಡೆಸಿರುವ ಸರ್ವೆಯಿಂದ ಸುಮಾರು 8 ಸಾವಿರ ಕುಟುಂಬಗಳು ಕಾಫಿ ತೋಟದ ಲೈನ್‍ಮನೆಗಳಲ್ಲಿ ವಾಸವಾಗಿದ್ದಾರೆ ಎಂದು ದೃಡಪಟ್ಟಿದೆ. ಆದರೆ ಕೊಡಗಿನಲ್ಲಿ ಸುಮಾರು ಹತ್ತು ಸಾವಿರ ಕುಟುಂಬಗಳು ಲೈನ್‍ಮನೆಯಲ್ಲಿದ್ದು, ನಿರಂತರವಾಗಿ ಸಾಲದಲ್ಲಿಯೇ ಬದುಕುವಂತಾಗಿದೆ. ತಲೆಮಾರಿನಿಂದ ತಲೆಮಾರಿಗೆ ಸಾಲದ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಲ ನೀಡಿರುವುದಕ್ಕೆ ಯಾವುದೇ ರೀತಿಯ ದಾಖಲೆಗಳಿಲ್ಲದಿದ್ದರೂ ಮಾಲೀಕರು ಹೇಳಿದ್ದನ್ನು ಕಾರ್ಮಿಕರು ಒಪ್ಪಿಕೊಳ್ಳುವ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿಗಳು ಕಾಫಿ ತೋಟದ ಲೈನ್‍ಮನೆಗಳಿಗೆ ಭೇಟಿ ನೀಡಿ ಅಲ್ಲಿನ ನೈಜ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಕಾಯ್ದೆ ಪ್ರಕಾರ ಕಾರ್ಮಿಕರಿಗೆ ಕನಿಷ್ಟ ವೇತನ 358 ರೂ. ಇದ್ದರೂ ಕೇವಲ ರೂ.150, 200, 250 ರಂತೆ ನೀಡಲಾಗುತ್ತಿದೆ. ಇದರಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಬುಡಕಟ್ಟು ಮಕ್ಕಳು ಕೂಲಿ ಕಾರ್ಮಿಕರಾಗಿ ಬದಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಲೈನ್‍ಮನೆಯಲ್ಲಿ ವಾಸವಿರುವ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ನೀಡಿ ಪುನರ್ ವಸತಿ ಕಲ್ಪಿಸುವಂತೆÉ ಬುಡಕಟ್ಟು ಕಾರ್ಮಿಕ ಸಂಘಟನೆಯಿಂದ ಕಳೆದ 5 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸುಮಾರು 10 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡುವುದಾದಲ್ಲಿ ಈಗ ಇರುವ ನೀತಿಗೆ ತಿದ್ದುಪಡಿ ತರುವ ಅಗತ್ಯವಿದ್ದು, ಜಿಲ್ಲಾಡಳಿತ ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಶೈಲೇಂದ್ರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವೈ.ಬಿ.ಗಪ್ಪು, ಸದಸ್ಯರಾದ ವೈ.ಎ.ದೇವಕ್ಕಿ, ಚಿನ್ನಮ್ಮ ಹಾಗೂ ವೈ.ಎಂ.ರತಿ ಉಪಸ್ಥಿತರಿದ್ದರು.