ಈ ಸಮಯದಲ್ಲಿ ಮಾತ್ರ ಪಿಂಡ ಪ್ರದಾನ ಮಾಡಲು ಅವಕಾಶ

14/01/2022

ಮಡಿಕೇರಿ ಜ.14 : ಕೋವಿಡ್ ಮಾರ್ಗಸೂಚಿಯ ನೆಪವೊಡ್ಡಿ ಪಿಂಡ ಪ್ರದಾನ ಮತ್ತು ಶಾಂತಿಪೂಜೆಗೆ ನಿರ್ಬಂಧ ಹೇರಿರುವುದನ್ನು ಜಿಲ್ಲೆಯ ಶಾಸಕರು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ಎಲ್ಲರ ಒತ್ತಾಯದ ಹಿನ್ನೆಲೆ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಿಂಡ ಪ್ರದಾನ ಮತ್ತು ಶಾಂತಿ ಪೂಜೆಗೆ ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಸಕ ಎಂ.ಪಿ.ಅಪಚ್ಚುರಂಜನ್ ಮಾತನಾಡಿ ಕೋವಿಡ್ ನಿಯಮಗಳನ್ನು ಅನುಸರಿಸಿ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಹಾಗೂ ಶಾಂತಿ ಪೂಜೆಗೆ ಅವಕಾಶ ಮಾಡಬೇಕು ಎಂದು ವಿಷಯ ಪ್ರಸ್ತಾಪಿಸಿದರು.
ಈ ಕುರಿತು ಧ್ವನಿಗೂಡಿಸಿದ ಶಾಸಕ ಕೆ.ಜಿ.ಬೋಪಯ್ಯ ಪ್ರತಿನಿತ್ಯ 10 ರಿಂದ 15 ಕುಟುಂಬಗಳು ಪಿಂಡ ಪ್ರದಾನ ಹಾಗೂ ಶಾಂತಿ ಪೂಜೆಗೆ ಆಗಮಿಸಲಿದ್ದು, ಈ ಕಾರ್ಯಕ್ಕೆ ಅವಕಾಶ ಮಾಡಬೇಕು. ಸ್ಥಳೀಯರಿಗೆ ಪೂಜಾ ಕಾರ್ಯದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಕೂಡ ಪಿಂಡ ಪ್ರದಾನಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.