ನೆಲ್ಯಹುದಿಕೇರಿ, ಅಭ್ಯತ್‌ಮಂಗಲ, ಸಿದ್ದಾಪುರ, ಕರಡಿಗೋಡು ಸಂತ್ರಸ್ತರಿಗೆ ನಿವೇಶನ

14/01/2022

ಮಡಿಕೇರಿ ಜ.14 : ನೆಲ್ಯಹುದಿಕೇರಿ, ಅಭ್ಯತ್‌ಮಂಗಲ, ಸಿದ್ದಾಪುರ, ಕರಡಿಗೋಡು ಭಾಗದ ಸಂತ್ರಸ್ತರಿಗೆ ನಿವೇಶನ ನೀಡುವ ಕುರಿತು ಜಿಲ್ಲೆಯ ಶಾಸಕರುಗಳು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಗಮನ ಸೆಳೆದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರoಜನ್ ಅವರು ಮಾತನಾಡಿ ನೆಲ್ಯಹುದಿಕೇರಿ, ಅಭ್ಯತ್‌ಮಂಗಲ ಭಾಗದಲ್ಲಿ ಪ್ರವಾಹಕ್ಕೆ ತುತ್ತಾಗುವ ಕುಟುಂಬಗಳಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ 30 ರಿಂದ 40 ಎಕರೆ ಪೈಸಾರಿ ಜಾಗ ಗುರುತಿಸಲಾಗಿದೆ. ಆ ನಿಟ್ಟಿನಲ್ಲಿ ಆರ್‌ಟಿಸಿ ಒದಗಿಸುವಂತಾಗಬೇಕು ಎಂದು ಅವರು ಹೇಳಿದರು.
ಈ ಕುರಿತು ಧ್ವನಿಗೂಡಿಸಿದ ಕೆ.ಜಿ.ಬೋಪಯ್ಯ ಅವರು ಸಿದ್ದಾಪುರ ಮತ್ತು ಕರಡಿಗೋಡು ಅಲ್ಲಿನ ಪ್ರವಾಹ ಪೀಡಿತ ಕುಟುಂಬಗಳಿಗೆ ನೆಲೆ ಒದಗಿಸಬೇಕಿದೆ. ಹಾಗೆಯೇ ಅಯ್ಯಪ್ಪ ಬೆಟ್ಟದಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸಬೇಕಿದೆ. ಅವರಿಗೆ ಜಾಗ ಒದಗಿಸಬೇಕಿದೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಮಳೆ ಹಾನಿಗೆ ತುತ್ತಾದ ಮನೆಗಳಿಗೆ ಪರಿಹಾರ ವಿತರಿಸಬೇಕು. ಬೆಳೆ ಹಾನಿ ಪರಿಹಾರ ಸಂಬoಧಿಸಿದoತೆ ಸರ್ಕಾರ ಇದುವರೆಗೆ 13 ನೇ ಹಂತದಲ್ಲಿ 63.59 ಕೋಟಿ ರೂ. ಬಿಡುಗಡೆ ಮಾಡಿ ಅರ್ಹರಿಗೆ ವರ್ಗಾವಣೆಯಾಗಿದೆ ಎಂದು ಅವರು ಹೇಳಿದರು.
ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯoಡ ರವಿಕುಶಾಲಪ್ಪ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಇತರರು ಇದ್ದರು.