ಅಭ್ಯತ್ ಮಂಗಲ ಅರೆಕಾಡು : ಮರಿಯಾನೆಯೊಂದಿಗಿದ್ದ ಕಾಡಾನೆ ಯುವಕನ ಜೀವ ತೆಗೆಯಿತು

14/01/2022

ಮಡಿಕೇರಿ ಜ.14 : ಕಾಡಾನೆ ದಾಳಿಗೆ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಅಭ್ಯತ್ ಮಂಗಲ ಅರೆಕಾಡು ವ್ಯಾಪ್ತಿಯಲ್ಲಿ ನಡೆದಿದೆ.
ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ನಲ್ವತ್ತೆಕ್ಕರೆ ಗ್ರಾಮದ ಖಾದರ್ ಹಾಗೂ ಸಮೀರ ದಂಪತಿಗಳ ಪುತ್ರ ಆಶಿಕ್ (19) ಎಂಬಾತನೇ ಮೃತ ದುರ್ದೈವಿ. ಈತನ ಸ್ನೇಹಿತ ಅಸ್ಮಿಲ್(19) ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಆಶಿಕ್ ನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸುವ ಸಂದರ್ಭ ಮೃತಪಟ್ಟಿದ್ದಾನೆ. ಸ್ನೇಹಿತನ ಮನೆಯಿಂದ ಬೈಕ್ ನಲ್ಲಿ ಮರಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ಮಾಡಿದೆ.
ಮರಿಯಾನೆಯೊಂದಿಗೆ ಸುಮಾರು 20 ಕಾಡಾನೆಗಳ ಹಿಂಡು ಈ ಭಾಗದಲ್ಲಿ ಬೀಡುಬಿಟ್ಟು ತಿಂಗಳೇ ಕಳೆದಿದ್ದು, ಅರಣ್ಯ ಇಲಾಖೆಯ ಕಾರ್ಯಾಚರಣೆ ವಿಫಲವಾಗುತ್ತಲೇ ಇದೆ. ದುಬಾರೆ ಮತ್ತು ಮೀನುಕೊಲ್ಲಿ ಭಾಗದಿಂದ ಆನೆಗಳು ಬಂದು ತೋಟಗಳಲ್ಲಿ ನೆಲೆ ನಿಂತಿವೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ತಕ್ಷಣ ಕಾಡಾನೆಗಳನ್ನು ಕಾಡಿಗಟ್ಟಬೇಕು ಮತ್ತು ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾ.ಪಂ ಅಧ್ಯಕ್ಷ ಸಾಬು ವರ್ಗೀಸ್ ಒತ್ತಾಯಿಸಿದ್ದಾರೆ.