ಫೀ.ಮಾ.ಕಾರ್ಯಪ್ಪ ಕಾಲೇಜ್ ವಿದ್ಯಾರ್ಥಿಗಳಿಂದ ಸೂರ್ಯ ನಮಸ್ಕಾರ

14/01/2022

ಮಡಿಕೇರಿ ಜ.14 : ಕೇಂದ್ರ ಆಯುಷ್ ಸಚಿವಾಲಯದ ನಿರ್ದೇಶನದಂತೆ ಮಕರ ಸಂಕ್ರಮಣದ ಪ್ರಯುಕ್ತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಕಾಲೇಜಿನಲ್ಲಿ ಶುಕ್ರವಾರ ಸೂರ್ಯ ನಮಸ್ಕಾರ ಆಯೋಜಿಸಲಾಗಿತ್ತು. ಎನ್‌ಸಿಸಿ, ಎನ್‌ಎಸ್‌ಎಸ್, ಲಲಿತ ಕಲಾ, ಕ್ರೀಡಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಹಾಸ್ಟೆಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಸೂರ್ಯ ನಮಸ್ಕಾರದ ಹನ್ನೆರೆಡು ಹಂತಗಳನ್ನು ಪ್ರದರ್ಶಿಸಿದರು.
ಸಕಲ ಜೀವರಾಶಿಯ ಬೆಳವಣಿಗೆಗೆ ತನ್ನ ಕಿರಣಗಳ ಮೂಲಕ ಚೈತನ್ಯ ನೀಡುವ ಸೂರ್ಯನಿಗೆ ಕೃತಜ್ಞತೆ ಸಮರ್ಪಿಸಲು ಸೂರ್ಯ ಸಮಸ್ಕಾರ ಪ್ರದರ್ಶನ ಆಯೋಜಿಸಲಾಗಿದ್ದು, ಈ ಅಭ್ಯಾಸ ಮನುಷ್ಯನದೇಹ ಮತ್ತು ಮನಸಿಗೆ ಚೈತನ್ಯತುಂಬಿ ಉತ್ತಮ ಆರೋಗ್ಯ ಹೋಂದಲು ಸಹಕಾರಿಯಾಗಿದೆ ಎಂದು ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಎನ್‌ಸಿಸಿ ಅಧಿಕಾರಿ ಮೇಜರ್ ಡಾ. ರಾಘವ. ಬಿ ಅವರು ತಿಳಿಸಿದರು.
ಜೂನಿಯರ್ ಅಂಡರ್ ಆಫೀಸರ್ ಭೂಮಿಕ, ಕೆಡೆಟ್ ನಿಶ್ಚಿತ ಅವರು ಸೂರ್ಯ ಸಮಸ್ಕಾರದ ಪ್ರದರ್ಶನದ ನೇತೃತ್ವ ವಹಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ರವಿಶಂಕರ್. ಎಂ.ಎನ್, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ತಿಪ್ಪೇಸ್ವಾಮಿ, ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಮಹದೇವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಟಿ.ದರ್ಶನ್ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.