ಅರಣ್ಯ ಭವನಕ್ಕೆ ಮುತ್ತಿಗೆ : ಕೊಡಗು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಎಚ್ಚರಿಕೆ

15/01/2022

ಮಡಿಕೇರಿ ಜ.15 : ಹುಲಿ ಮತ್ತು ಕಾಡಾನೆ ದಾಳಿ ತಡೆಗೆ ಶಾಶ್ವತ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಕುರಿತು ಲಿಖಿತ ರೂಪದಲ್ಲಿ ಸೂಕ್ತ ಭರವಸೆ ನೀಡದಿದ್ದಲ್ಲಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಹಾಗೂ ಮಡಿಕೇರಿ ನಗರಾಧ್ಯಕ್ಷ ಕೆ.ಜಿ.ಪೀಟರ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಸಂಜೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ನಲ್ವತ್ತೆಕ್ಕರೆ ಯುವಕ ಆಶಿಕ್ ನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿದ ನಂತರ ಮಾತನಾಡಿದ ಅವರು ಅರಣ್ಯ ಇಲಾಖೆಯ ನಿರ್ಲಕ್ಷö್ಯದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಆರೋಪಿಸಿದರು.
ಕಳೆದ ವರ್ಷ ಹುಲಿ ದಾಳಿಯಿಂದ ಹತ್ತಾರು ಜಾನುವಾರುಗಳು ಮತ್ತು ಮೂರು ಮಾನವ ಜೀವಹಾನಿಯಾಗಿದೆ. ಕಾಡಾನೆ ದಾಳಿಯಿಂದಲೂ ಕಷ್ಟ, ನಷ್ಟ, ಸಾವು ಸಂಭವಿಸಿದೆ. ಇದೀಗ ವರ್ಷದ ಆರಂಭದಿoದಲೇ ಹುಲಿ ಮತ್ತು ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಹುಲಿ ದಾಳಿಗೆ ಸುಮಾರು 6 ಹಸುಗಳು ಬಲಿಯಾಗಿವೆ. ಇದೀಗ ಅಭ್ಯತ್ ಮಂಗಲದಲ್ಲಿ ನಡೆದ ಕಾಡಾನೆ ದಾಳಿಯಿಂದ ಅಮಾಯಕ ಯುವಕ ಸಾವನ್ನಪ್ಪಿದ್ದಾನೆ. ವನ್ಯಜೀವಿಗಳ ದಾಳಿಯಾದಾಗ ಮಾತ್ರ ಪ್ರತ್ಯಕ್ಷರಾಗುವ ಅರಣ್ಯಾಧಿಕಾರಿಗಳು ನಂತರದ ದಿನಗಳಲ್ಲಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭ್ಯತ್ ಮಂಗಲ ವ್ಯಾಪ್ತಿಯಲ್ಲಿ ಸುಮಾರು 20 ಕಾಡಾನೆಗಳ ಹಿಂಡು ತೋಟಗಳಲ್ಲಿ ಬೀಡುಬಿಟ್ಟು ತಿಂಗಳೇ ಕಳೆದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿದರು.
ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿಗಳ ದಾಳಿ ಮಿತಿ ಮೀರುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊಡಗಿನ ಜನರ ನೆರವಿಗೆ ಬರುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಸರಕಾರಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ವನ್ಯಜೀವಿಗಳ ದಾಳಿ ಪ್ರದೇಶಕ್ಕೆ ಭೇಟಿ ನೀಡಿ ಕೃಷಿಕರು ಹಾಗೂ ಕಾರ್ಮಿಕರ ಸಂಕಷ್ಟವನ್ನು ಅರಿಯದೆ ಕೇವಲ ಜಿ.ಪಂ ಸಭಾಂಗಣದಲ್ಲಿ ಸಭೆ ನಡೆಸಿ ಮರಳಿದ್ದಾರೆ ಎಂದು ಟೀಕಿಸಿದರು.
ವನ್ಯಜೀವಿಗಳ ದಾಳಿ ತಡೆಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಿ ಕಳೆದ 5- 6 ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದರೂ ಸರಕಾರ ಮತ್ತು ಅರಣ್ಯ ಇಲಾಖೆ ಜಾಣ ಮೌನಕ್ಕೆ ಶರಣಾಗಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಜೀವಗಳು ಬಲಿಯಾಗಬೇಕೆಂದು ಪ್ರಶ್ನಿಸಿರುವ ಉಸ್ಮಾನ್ ಹಾಗೂ ಪೀಟರ್, ಮುಂದಿನ 15 ದಿನಗಳಲ್ಲಿ ಶಾಶ್ವತ ಯೋಜನೆಯ ಕುರಿತು ಭರವಸೆ ದೊರೆಯದಿದ್ದಲ್ಲಿ ಜಿಲ್ಲೆಯ ಕೃಷಿಕರು ಹಾಗೂ ಕಾರ್ಮಿಕರನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷದಿಂದ ಅರಣ್ಯ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.