ಅಭ್ಯತ್ ಮಂಗಲ : ಕಾಡಿಗೋಡಲು ಒಪ್ಪದ ಕಾಡಾನೆಗಳ ಹಿಂಡು

15/01/2022

ಮಡಿಕೇರಿ ಜ.15 : ಅಭ್ಯತ್ ಮಂಗಲದಲ್ಲಿ ಯುವಕನೋರ್ವ ಕಾಡಾನೆ ದಾಳಿಯಿಂದ ಮೃತಪಟ್ಟ ನಂತರ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಗಜ ಹಿಂಡನ್ನು ಕಾಡಿಗಟ್ಟಲು ಕಾರ್ಯಾಚರಣೆ ಕೈಗೊಂಡಿದೆ.
ಇoದು ಬೆಳಗ್ಗೆಯಿಂದಲೇ ಅಭ್ಯತ್ ಮಂಗಲ, ಅರೆಕಾಡು, ವಾಲ್ನೂರು, ತ್ಯಾಗತ್ತೂರು, ಬೆಟ್ಟದಕಾಡು, ಸಂಪಿಗೆಕೊಲ್ಲಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ತೋಟಗಳಲ್ಲಿ ನೆಲೆ ನಿಂತಿರುವ 13 ಕ್ಕೂ ಹೆಚ್ಚು ಕಾಡಾನೆಗಳನ್ನು ಕಾಡಿಗಟ್ಟುವ ಪ್ರಯತ್ನ ಮಾಡಲಾಯಿತು.
ಆದರೆ ಎಲ್ಲಾ ಆನೆಗಳು ರಸ್ತೆಗಿಳಿದವೇ ಹೊರತು ಕಾಡಿಗೋಡುವ ಮನಸ್ಸು ಮಾಡಲಿಲ್ಲ. ಸಂಜೆಯವರೆಗೆ ಅರಣ್ಯ ಸಿಬ್ಬಂದಿಗಳು ಮಾಡಿದ ಪ್ರಯತ್ನ ವಿಫಲವಾಗಿದ್ದು, ಕೆಲವು ಆನೆಗಳು ಇನ್ನೂ ಕೂಡ ಕಾಫಿ ತೋಟದಲ್ಲೇ ಇವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾಡಾನೆಗಳ ಹಿಂಡು ಓಡುವ ಸಂದರ್ಭ ಕಾಫಿ ತೋಟಗಳಿಗೆ ಅಪಾರ ಹಾನಿಯಾಗಿದ್ದು, ಕೊಯ್ಲಿಗೆ ಸಿದ್ಧವಾಗಿದ್ದ ಕಾಫಿ ಹಣ್ಣು ನೆಲಕಚ್ಚಿದೆ. ಅರಣ್ಯ ಇಲಾಖೆ ನಷ್ಟವನ್ನು ಭರಿಸಬೇಕೆಂದು ತೋಟದ ಮಾಲೀಕರು ಒತ್ತಾಯಿಸಿದ್ದಾರೆ.
ದುಬಾರೆ ಮತ್ತು ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯಿಂದ ಬಂದಿರುವ ಕಾಡಾನೆಗಳ ಹಿಂಡು ಕಳೆದ ಒಂದು ತಿಂಗಳಿನಿoದ ಇಲ್ಲೇ ನೆಲೆ ನಿಂತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರ ಕೂಡ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯಲಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರು ಎಚ್ಚರಿಕೆಯಿಂದಿರಬೇಕೆoದು ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಮನವಿ ಮಾಡಿದ್ದಾರೆ.