ಡಾ.ಕಸ್ತೂರಿ ರಂಗನ್ ವರದಿ ಕುರಿತು ಕೊಡಗಿನ ಜನಪ್ರತಿನಿಧಿಗಳ ಜಾಣಮೌನ

15/01/2022

ಮಡಿಕೇರಿ ಜ.14 : ಡಾ.ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ಬಿಡುವುದಿಲ್ಲ ಎನ್ನುವ ಜಿಲ್ಲೆಯ ಜನಪ್ರತಿನಿಧಿಗಳು ಇದೀಗ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಎಂ) ಜಿಲ್ಲಾ ಸಮಿತಿ ಸದಸ್ಯ ಡಾ.ಇ.ರಾ.ದುರ್ಗಾಪ್ರಸಾದ್, ವರದಿ ಅನುಷ್ಠಾನಗೊಂಡರೆ ಜಿಲ್ಲೆಯ ಜನರು ನಿತ್ಯ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ಡಾ.ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಪಶ್ಚಿಮ ಘಟ್ಟದ ಜಿಲ್ಲೆಗಳ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಅದಕ್ಕೆ ಪೂರಕವಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ವರದಿಯಲ್ಲಿನ ಶಿಫಾರಸ್ಸನ್ನು ಪರಾಮರ್ಶೆ ನಡೆಸಿ ಸೂಕ್ತ ವರದಿ ಕೊಡುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗಿದೆ. ಆ ಸಮಿತಿಯಲ್ಲಿ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ನೇಮಿಸಿಕೊಳ್ಳುವ ಬದಲು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳ ಪ್ರತಿನಿಧಿಗಳನ್ನು ನೇಮಿಸಬೇಕಿತ್ತು ಎಂದರು.
ಲೋಕಸಭಾ ಚುನಾವಣೆಗೂ ಮೊದಲು ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೆ ವಂಚಿಸುತ್ತಾ ಬಂದಿರುವ ಪ್ರತಾಪ್ ಸಿಂಹ ಅವರಿಂದ ಕಸ್ತೂರಿ ರಂಗನ್ ವಿಚಾರದಲ್ಲಿ ಜನರಿಗೆ ನ್ಯಾಯ ದೊರಕುತ್ತದೆ ಎಂದು ಭಾವಿಸುವುದು ಮೂರ್ಖತನ ಎಂದು ಟೀಕಿಸಿದರು.
ತಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಅನುಷ್ಠಾನಕ್ಕೆ ತರುವುದಿಲ್ಲ, ಪರಿಸರ ಸೂಕ್ಷö್ಮ ಪ್ರದೇಶಗಳನ್ನು ರಚಿಸುವುದಿಲ್ಲ ಎಂದು ಚುನಾವಣಾ ಪ್ರಣಾಳಿಕೆ ಮೂಲಕ ಭರವಸೆ ನೀಡಿದ್ದರು, ಆದರೆ ಇದೀಗ ತಮ್ಮ ಕರ್ತವ್ಯವನ್ನು ಮರೆತ್ತಿದ್ದಾರೆ. 2016-17ರಲ್ಲಿ ನಡೆದ ಸಭೆಗೆ ಹಾಜರಾಗಿ ಕೇಂದ್ರ ಸರಕಾರದ ವರದಿಯನ್ನು ಅನುಷ್ಠಾನಕ್ಕೆ ತರುವುದನ್ನು ತಡೆಯಲು ಪ್ರಯತ್ನಿಸಬೇಕಿತ್ತು. ಆದರೆ ಸಭೆಗೆ ಹಾಜರಾಗದೆ ಬೇಜವಾಬ್ದಾರಿತನ ತೋರಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಡಾ.ಕಸ್ತೂರಿ ರಂಗನ್ ವರದಿಯ ವಿರುದ್ಧ ಜಿಲ್ಲೆಯ ಶಾಸಕರು ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರು ವೀರಾವೇಶದ ಮಾತುಗಳನ್ನಾಡಿದ್ದರು. ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗಿರುವ ಬಿಜೆಪಿಯ ಮುಖಂಡರು, ತಮ್ಮ ಸುಳ್ಳಿನ ಪರಂಪರೆಯನ್ನು ಮತ್ತೆ ಪ್ರದರ್ಶಿಸುತ್ತಿದ್ದಾರೆ ಎಂದು ಡಾ.ದುರ್ಗಾಪ್ರಸಾದ್ ಟೀಕಿಸಿದರು.
ಜಿಲ್ಲೆ ಜನ ಡಾ.ಕಸ್ತೂರಿ ರಂಗನ್ ವರದಿಯ ವಿರುದ್ಧ ಧ್ವನಿ ಎತ್ತಬೇಕು. ಸಮಿತಿಯ ಶಿಫಾರಸ್ಸನ್ನು ಅನುಷ್ಠಾನಕ್ಕೆ ತರದಂತೆ ಒತ್ತಡ ಹೇರಬೇಕು. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಹೆಚ್.ಬಿ.ರಮೇಶ್ ಉಪಸ್ಥಿತರಿದ್ದರು.