ಸೋಮವಾರಪೇಟೆ : ಅವೈಜ್ಞಾನಿಕ ರಸ್ತೆ ಉಬ್ಬು : ಸಾರ್ವಜನಿಕರ ಅಸಮಾಧಾನ

15/01/2022

ಸೋಮವಾರಪೇಟೆ ಜ.15 : ಪಟ್ಟಣದ ಜನನಿಬಿಡ ಹಾಗು ಅಧಿಕ ವಾಹನ ಸಂಚಾರವಿರುವ ರಸ್ತೆಯಲ್ಲಿ ಗುತ್ತಿಗೆದಾರರೊಬ್ಬರು ಅವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಿಸಿದ ಹಿನ್ನೆಲೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಪಟ್ಟಣದಿಂದ ಮಹದೇಶ್ವರ ಬಡಾವಣೆ ಹಾಗು ಜನತಾಕಾಲನಿಗೆ ತೆರಳುವ ರಸ್ತೆಯ ಎರಡು ಕಡೆಗಳಲ್ಲಿ ಉಬ್ಬು ನಿರ್ಮಿಸಲಾಗಿದೆ. ತೀರಾ ಎತ್ತರವಾಗಿ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ನಾಲ್ಕು ಚಕ್ರ ವಾಹನಗಳ ತಳಭಾಗಕ್ಕೆ ಉಬ್ಬು ತಾಗಿ ಹಾನಿಯಾಗುತ್ತಿದೆ.
ಕಳೆದ ಎರಡು ದಿನಗಳಿಂದ ಮೂವರು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.ಸ್ಥಳೀಯ ವಾರ್ಡ್ ಸದಸ್ಯರ ಸೂಚನೆಯಂತೆ ರಸ್ತೆ ಹುಬ್ಬು ನಿರ್ಮಿಸಲಾಗಿದೆ ಎಂದು ಗುತ್ತಿಗೆದಾರರು ಪತ್ರಿಕೆಗೆ ತಿಳಿಸಿದ್ದಾರೆ.
ರಸ್ತೆ ಉಬ್ಬು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದೆ ಇದ್ದಲ್ಲಿ ವಾರ್ಡ್ನಿವಾಸಿಗಳೇ ಸೇರಿ ಇದನ್ನು ತೆರವುಗೊಳಿಸುತ್ತೇವೆ ಎಂದು ಸ್ಥಳೀಯರಾದ ಮೋಹನ, ಉಮೇಶ್, ಚಂದ್ರ ಮತ್ತಿತರರು ಪತ್ರಿಕಾ ಹೇಳಿಕೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.