59ರ ಸಂಭ್ರಮದಲ್ಲಿ ಜಾಮಿಯಾ ನೂರಿಯಾ ಅರಬಿಕ್ ಕಾಲೇಜು

20/01/2022

ಮಂಗಳೂರು: ದಕ್ಷಿಣ ಭಾರತದ ಅತ್ಯುನ್ನತ ಧಾರ್ಮಿಕ ಶಿಕ್ಷಣ ಕೇಂದ್ರವಾದ ಪಟ್ಟಿಕ್ಕಾಡ್ ಜಾಮಿಯಾ ನೂರಿಯಾ ಅರಬಿಕ್ ಕಾಲೇಜಿನ 59ನೇ ಘಟಿಕೋತ್ಸವ ಹಾಗೂ 57ನೇ ಪದವಿ ಪ್ರಧಾನ ಸಮಾರಂಭವು ಜ. 28,29 ಹಾಗೂ 30 ರಂದು ಕಾಲೇಜಿನ ಪಿ.ಎಂ.ಎಸ್.ಎ.ಪೂಕೋಯ ತಂಙಳ್ ನಗರದಲ್ಲಿ ನಡೆಯಲಿದೆ.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧೀನದಲ್ಲಿ ಕೇರಳ-ಕರ್ನಾಟಕದ ಮೊತ್ತ ಮೊದಲ ಪದವಿ ಪ್ರಧಾನ ಸಂಸ್ಥೆಯಾಗಿ, ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಪ್ರಾರಂಭಿಸಿದ ಸಂಸ್ಥೆಯಲ್ಲಿಂದು ಸಾವಿರಕ್ಕಿಂತಲೂ ಮೇಲ್ಪಟ್ಟು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಏಳು ಸಾವಿರಕ್ಕಿಂತಲೂ ಅಧಿಕ ಮಂದಿ ಈವರೆಗೆ ಬಿರುದುದಾರಿಗಳಾಗಿ ವಿವಿಧೆಡೆಗಳಲ್ಲಿ ಧಾರ್ಮಿಕ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಸುಮಾರು 60 ರಷ್ಟು ಜೂನಿಯರ್ ಕಾಲೇಜುಗಳು ಹಾಗೂ ದರ್ಸ್ ಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಜಾಮಿಯಾವನ್ನೇ ನೇರವಾಗಿ ಆಶ್ರಯಿಸಿರುವುದರಿಂದ ಈ ವಿದ್ಯಾರ್ಥಿ ಸಂಖ್ಯಾಬಲವು ಇನ್ನೂ ದ್ವಿಗುಣಗೊಳ್ಳಲಿದೆ.

ದಿನವೊಂದಕ್ಕೆ ಲಕ್ಷಕ್ಕಿಂತಲೂ ಅಧಿಕ ರೂಪಾಯಿ ಖರ್ಚು ಬರುತ್ತಿದ್ದು, ಪ್ರಸ್ತುತ ಇರುವ ವರಮಾನಗಳಾವುದೂ ಸಾಕಾಗುತ್ತಿಲ್ಲ. ಇದಕ್ಕಾಗಿಯೇ ತವಾಸುಲ್ ಪದ್ಧತಿಯನ್ನು ಆಯೋಜಿಸಿ ಈಗಾಗಲೇ ಫೈಝೀಸ್ ಜಿಲ್ಲಾ ಸಮಿತಿ ಮುಖಾಂತರ ರೇಂಜ್ ಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಿ ವಿಶೇಷ ಸಹಾಯಧನ ಸಂಗ್ರಹ ಕಾರ್ಯ ಯೋಜನೆಯನ್ನು ಹಾಕಿ ಕೊಂಡಿದೆ. ಅಲ್ಲದೇ ಜ.21 ರಂದು ಜುಮಾ ದಿನ ಮಸೀದಿಗಳಲ್ಲಿ ಇದರ ಬಗ್ಗೆ ವಿಷಯ ಪ್ರಸ್ತಾಪಿಸಿ ಸಹಾಯಧನ ಸಂಗ್ರಹಕ್ಕೆ ಜಾಮಿಯಾದ ಸಾರಥಿಗಳಾದ ಬಹು ಪಾಣಕ್ಕಾಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್, ಸಯ್ಯಿದ್ ಸಾದಿಖಲಿ ಶಿಹಾಬ್ ತಂಙಳ್,ಶೈಖುಲ್ ಜಾಮಿಆಃ ಶೈಖುನಾ ಆಲಿಕುಟ್ಟಿ ಉಸ್ತಾದ್ ಮನವಿ ಮಾಡಿದ್ದು, ಪ್ರಸ್ತುತ ಫಂಡ್ ಸಂಗ್ರಹವನ್ನು ಹಾಗೂ ಸಮ್ಮೇಳನಗಳನ್ನು ಯಶಸ್ವಿಗೊಳಿಸಲು ಕರ್ನಾಟಕ ರಾಜ್ಯ ಫೈಝೀಸ್ ಅಧ್ಯಕ್ಷರಾದ ಬಹು ಉಸ್ಮಾನುಲ್ ಫೈಝಿ, ಪ್ರಧಾನ ಕಾರ್ಯದರ್ಶಿಯಾದ ಬಹು ಅಶ್ರಫ್ ಫೈಝಿ ಕೊಡಗು ಹಾಗೂ ಕೋಶಾಧಿಕಾರಿ ಬಹು ಕನ್ಯಾನ ಸುಲೈಮಾನ್ ಫೈಝಿ ಕರೆ ನೀಡಿದ್ದಾರೆ.