ನೇತಾಜಿ ಸುಭಾಶ್ ಚಂದ್ರ ಬೋಸ್, ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಮೆರವಣಿಗೆಗೆ ಅವಕಾಶ ಬೇಕು

ಮಡಿಕೇರಿ ಜ.20 : ಕೇಂದ್ರ ಸರಕಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಮತ್ತು ಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರ ಮೆರವಣಿಗೆಗೆ ಅವಕಾಶ ನೀಡಲೇಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ನೀಡುವ ಮಾದರಿಗಳನ್ನು ಕೇಂದ್ರ ಸರಕಾರ ಪುರಸ್ಕರಿಸಬೇಕೆ ಹೊರತು ತಿರಸ್ಕರಿಸಬಾರದು. ಅದರಲ್ಲೂ ಸಮಾಜ ಮತ್ತು ದೇಶಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಮಹಾನ್ ವ್ಯಕ್ತಿಗಳನ್ನು ನೀತಿ, ನಿಯಮ ಕಾನೂನು ನೆಪದಲ್ಲಿ ಯಾವತ್ತೂ ತಿರಸ್ಕಾರ ಮಾಡಬಾರದು, ಅದು ಸಾಧ್ಯವೂ ಇಲ್ಲ ಎಂದು ಹೇಳಿದರು.
ಆದರೆ ಕೇಂದ್ರ ಸರಕಾರ, ಒಕ್ಕೂಟ ವ್ಯವಸ್ಥೆ ಮತ್ತು ಸುಭಾಶ್ ಚಂದ್ರ ಬೋಸ್ ಹಾಗೂ ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಕೇಂದ್ರದ ನಡೆ ಖಂಡನೀಯವಾಗಿದ್ದು, ಇದನ್ನು ಸರಿಪಡಿಸಲೇಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರ, ಪ್ರದಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರುಗಳು ಕ್ಷಮೆಯಾಚಿಸಿ ಜನವರಿ 26ರ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಈ ಎರಡೂ ಸ್ತಬ್ದಚಿತ್ರಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.