ಮಡಿಕೇರಿ : ಸೋಂಕಿತರು ಪರಾರಿ : ಪ್ರಕರಣ ದಾಖಲು

20/01/2022

ಮಡಿಕೇರಿ ಜ.20 : ಕೋವಿಡ್ ಸೋಂಕು ತಗುಲಿ ಕ್ವಾರಂಟೇನ್‌ನಲ್ಲಿದ್ದ ಮೂವರು ಹೊರ ರಾಜ್ಯದ ಕಟ್ಟಡ ಕಾರ್ಮಿಕರ ಸಹಿತ 7 ಮಂದಿ ಪ್ರಾಥಮಿಕ ಸಂಪರ್ಕಿತರು ರಾತ್ರಿ ವೇಳೆ ಪರಾರಿಯಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಗರದ ಗಾಂಧಿ ಮಂಟಪ ಬಳಿ ನಿರ್ಮಾಣ ಹಂತದಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ಜಾರ್ಖಂಡ್ ಮೂಲದ ಸುಶೀಲ್(24), ಶಾಂಬು ಉರವನ್(25), ಫಂಟು(19) ಎಂಬವರೇ ಪರಾರಿಯಾದ ಕಾರ್ಮಿಕರಾಗಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಬಹು ಮಹಡಿ ಕಟ್ಟಡದಲ್ಲಿ ಒಟ್ಟು 150 ಮಂದಿ ಅಸ್ಸಾಂ ಹಾಗೂ ಜಾರ್ಖಂಡ್ ಮೂಲದ ಕಾರ್ಮಿಕರಿದ್ದರು. ಕೆಲ ದಿನಗಳ ಹಿಂದೆ ಇಬ್ಬರಿಗೆ ಕೋವಿಡ್ ಲಕ್ಷಣಗಳು ಕಂಡು ಬಂದಿತ್ತು. ಈ ವೇಳೆ ಎಲ್ಲರನ್ನೂ ಪರೀಕ್ಷಿಸಿದಾಗ ಒಟ್ಟು 59 ಕಾರ್ಮಿಕರು ಕೋವಿಡ್ ಪಾಸಿಟವ್ ಆಗಿರುವುದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಕಾರ್ಮಿಕರು ಆಶ್ರಯ ಪಡೆದಿದ್ದ ಕಟ್ಟಡದ ನೆಲ ಮಹಡಿಯಲ್ಲೇ ಎಲ್ಲಾ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿ, ಕಟ್ಟಡವನ್ನು ಸೀಲ್‌ಡೌನ್ ಮಾಡಲಾಗಿತ್ತು. ಆದರೆ ಗುರುವಾರ ಬೆಳಗಿನ ಜಾವ ಮೂವರು ಕಾರ್ಮಿಕರು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಇವರೊಂದಿಗೆ 7 ಮಂದಿ ಪ್ರಾಥಮಿಕ ಸಂಪರ್ಕಿತರು ಕೂಡ ಪರಾರಿಯಾಗಿದ್ದು, ಎಲ್ಲರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದೆ. ಎಲ್ಲರೂ ಕೂಡ ಬುಧವಾರ ರಾತ್ರಿ ವೇಳೆ ಕಟ್ಟಡದ ಗೇಟ್ ಹಾರಿ ಪರಾರಿಯಾಗಿರುವ ಶಂಕೆ ವ್ಯಕ್ತಗೊಂಡಿದೆ.
ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾತ್ರವಲ್ಲದೇ ಕ್ವಾರಂಟೇನ್‌ನಲ್ಲಿದ್ದು ಪರಾರಿಯಾದ ಕಾರ್ಮಿಕರ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಗೆ ಸಂಬoಧಿಸಿದoತೆ ನಾಪತ್ತೆಯಾದವರನ್ನು ಹುಡುಕಿಕೊಡುವಂತೆ ಮಡಿಕೇರಿ ತಾಲೂಕು ವೈದ್ಯಾಧಿಕಾರಿಗಳು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದಾರೆ.