ಕೊಡಗು ಪತ್ರಕರ್ತರ ಸಂಘ ಉದ್ಘಾಟನೆ : ಪತ್ರಕರ್ತರು ವ್ಯಕ್ತಿಯ ಚಾರಿತ್ರ್ಯವಧೆ ಮಾಡಬಾರದು : ಶಾಸಕ ಎಂ.ಪಿ.ಅಪ್ಪಚ್ಚು ರಂಜನ್

20/05/2022

ಮಡಿಕೇರಿ ಮೇ 20 : ಸಮಾಜದ ತಪ್ಪುಗಳನ್ನು ತಿದ್ದುವ ಮೂಲಕ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಪತ್ರಕರ್ತರು ಕಾರ್ಯ ನಿರ್ವಹಿಸಬೇಕೆ ಹೊರತು ವ್ಯಕ್ತಿಯ ಚಾರಿತ್ರ್ಯವಧೆ ಮಾಡಬಾರದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಕೊಡಗು ಪತ್ರಕರ್ತರ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಮಾಡುವ ವರದಿಗಳು ಸಮಾಜ ಸುಧಾರಣೆ ಮತ್ತು ಅಭಿವೃದ್ಧಿ ಪರವಾಗಿರಬೇಕು ಎಂದರು.
ಪತ್ರಕರ್ತರ ಕೆಲಸ ಕಷ್ಟದ ಕೆಲಸ, ಆದರೆ ವ್ಯಕ್ತಿಯ ಚಾರಿತ್ರ್ಯವಧೆಯ ವರದಿಗಳಿಂದ ಯಾವುದೇ ಪ್ರಯೋಜನವಿಲ್ಲ. ರಾಜಕರಣಿಗಳ, ಸಮಾಜ ಸೇವಕರ ತಪ್ಪುಗಳನ್ನು ತಿದ್ದುವುದರ ಜೊತೆಗೆ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡುವಂತಿರಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ನೀಡುವ ವರದಿಗಳಿಗೆ ಆದ್ಯತೆ ನೀಡುವಂತೆ ಅಪ್ಪಚ್ಚು ರಂಜನ್ ತಿಳಿಸಿದರು.
ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯನ್ನು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಸಮಾಜದಲ್ಲಿ ಪತ್ರಕರ್ತರ ಪಾತ್ರ ಮತ್ತು ಜವಾಬ್ದಾರಿ ದೊಡ್ಡದು, ಸಂವಿಧಾನದ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗವನ್ನು ಗುರುತಿಸಲಾಗಿದ್ದು, ಸಮಾಜದಲ್ಲಿನ ವ್ಯತ್ಯಾಸಗಳನ್ನು ಹುಡುಕಿ ಜನರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಶಾಶ್ವತವಾಗಿರಬೇಕೆಂದ ಅವರು, ಪತ್ರಕರ್ತರ ಬೇಡಿಕೆಗಳಿಗೆ ಸರಕಾರದ ಮಟ್ಟದಲ್ಲಿ ಸ್ಪಂದಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಪತ್ರಿಕಾರಂಗ ಸಮಾಜವನ್ನು ಎಚ್ಚರಿಸಿ ಅಲ್ಲಿನ ಅಂಕುಡೊಂಕುಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದೆ ಎಂದರು.
ಪತ್ರಕರ್ತರು ಸಮಾಜದ ಆಸ್ತಿಯಾಗಿದ್ದರೂ ರಕ್ಷಣೆ ಮತ್ತು ಜೀವನ ಭದ್ರತೆ ಇಲ್ಲದಾಗಿದೆ. ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಜಾಗ ಗುರುತಿಸಿಕೊಡುವ ಭರವಸೆ ನೀಡಿದ ಅವರು, ಸರಕಾರದ ಮಟ್ಟದಲ್ಲಿ ಸೂಕ್ತ ಸ್ಪಂದನೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಪತ್ರಕರ್ತರು ನೇರ, ದಿಟ್ಟ, ಸತ್ಯ ಬರವಣಿಗೆಯ ಮೂಲಕ ಜನಪ್ರತಿನಿಧಿಗಳನ್ನು ಎಚ್ಚರಿಸುವ ಮತ್ತು ಉತ್ಸಾಹ ತುಂಬುವ ಕಾರ್ಯ ಮಾಡಬೇಕು. ಒಬ್ಬ ವ್ಯಕ್ತಿ ಅಥವಾ ವಿಷಯದ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ವರದಿ ಮಾಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಹಿರಿಯ ಪತ್ರಕರ್ತ ಟಿ.ಪಿ.ರಮೇಶ್ ಮಾತನಾಡಿ, ಪತ್ರಿಕಾರಂಗ ತನ್ನ ವರ್ಚಸ್ಸನ್ನು ಕಳೆದುಕೊಳ್ಳಬಾರದು, ಸರ್ವಾಧಿಕಾರದ ವ್ಯವಸ್ಥೆಯಡಿ ಯಾವುದೂ ನಡೆಯಬಾರದು, ಹೊಸತನವನ್ನು ರೂಪಿಸಿಕೊಂಡು ಎಲ್ಲರ ಬೇಕು, ಬೇಡಗಳಿಗೆ ಸಮಾನವಾಗಿ ಸ್ಪಂದಿಸುವ ಕೆಲಸ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಬಿ.ಜಿ.ಅನಂತಶಯನ ಧೈರ್ಯ ಮತ್ತು ಆತ್ಮಸ್ಥರ್ಯ ಪತ್ರಕರ್ತರಿಗೆ ಮುಖ್ಯ, ಜ್ಞಾನವನ್ನು ತುಂಬಿಸಿಕೊಳ್ಳುವ ಕೆಲಸವನ್ನು ಪತ್ರಕರ್ತರು ಮಾಡಬೇಕು, ನಿಂತ ನೀರಾಗದೆ ಹರಿಯುವ ನದಿಯಾಗಿ ಎಲ್ಲರಿಗೂ ಉಪಕಾರಿಯಾಗಿ ಬಾಳಬೇಕು ಎಂದರು.
ಕಲಿಕೆ ಎಂಬುವುದು ನಿತ್ಯ ನಮ್ಮಲ್ಲಿರಬೇಕು, ಪತ್ರಿಕೆಯ ವಿಶಾಲತೆಯನ್ನು ಅರಿತು ಕ್ರಿಯಾತ್ಮಕವಾಗಿರಬೇಕು. ಸಮಾಜಕ್ಕೆ ಉಪಯೋಗವಾಗುವ ಲೇಖನವನ್ನು ಬರೆಯಬೇಕು, ಬುದ್ದಿವಂತಿಕೆ, ತಾಳ್ಮೆ, ನಗು ಹೆಚ್ಚಿರಬೇಕು ಎಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರುಳೀಧರ್ ಪ್ರಾಸ್ತವಿಕವಾಗಿ ಮಾತನಾಡಿ, ಮಾಧ್ಯಮ ಪ್ರತಿನಿಧಿಗಳ ಅಭ್ಯುದಯಕ್ಕಾಗಿ ಹಿರಿಯರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಸಂಘ 120 ಸದಸ್ಯ ಬಲವನ್ನು ಹೊಂದಿದೆ. ಪತ್ರಕರ್ತರ ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಶಾಸಕರು ಗಮನ ಹರಿಸುವಂತೆ ಮನವಿ ಮಾಡಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ರಮೇಶ್ ಹೊಳ್ಳ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟಿ ಬಿ.ಎಸ್.ಮನುಶೆಣೈ ಮಾತನಾಡಿ, ಶುಭ ಹಾರೈಸಿದರು.
ಹಿರಿಯ ಪತ್ರಕರ್ತ ಬಿ.ಜಿ.ಅನಂತಶಯನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
::: ಕ್ಷೇಮನಿಧಿಗೆ ಆರ್ಥಿಕ ನೆರವು :::
ಇದೇ ಸಂದರ್ಭ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಇದೇ ಸಂದರ್ಭ ಕೊಡಗು ಪತ್ರಕರ್ತರ ಸಂಘದ ಕ್ಷೇಮನಿಧಿಗೆ ಆರ್ಥಿಕ ನೆರವು ಘೋಷಣೆ ಮಾಡಿದರು. ತಮ್ಮ ತಾಯಿ ರಾಜಲಕ್ಷ್ಮಿ ಅವರ ಹೆಸರಿನಲ್ಲಿ ಹಿರಿಯ ಪತ್ರಕರ್ತ ಬಿ.ಜಿ.ಅನಂತಶಯನ ಅವರು ರೂ.25 ಸಾವಿರ ದತ್ತಿನಿಧಿ ನೀಡಿದರು.
::: ಸನ್ಮಾನ :::
ಹಿರಿಯ ಪತ್ರಕರ್ತರಾದ ಬಿ.ಜಿ.ಅನಂತಶಯನ ಹಾಗೂ ಅನಿಲ್ ಹೆಚ್.ಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀರಕ್ಷ ಪ್ರಭಾಕರ್ ಪ್ರಾರ್ಥಿಸಿ, ಹಿರಿಯ ಪತ್ರಕರ್ತರಾದ ಕೆ.ತಿಮ್ಮಪ್ಪ ಹಾಗೂ ಅನಿಲ್ ಹೆಚ್.ಟಿ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಸರ್ವ ಸದಸ್ಯರ ಸಭೆ ನಡೆಯಿತು. ಹಿರಿಯ ಪತ್ರಕರ್ತರಾದ ಎಸ್.ಎಂ.ಶ್ರೀನಿವಾಸ್ ಚಂಗಪ್ಪ ಹಾಗೂ ಡಿ.ಎಸ್.ನಾಗಭೂಷಣ್ ಅವರಿಗೆ ಸಭೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು.