ಚೆರಿಯಪರಂಬು ರಸ್ತೆ ಅವ್ಯವಸ್ಥೆ : ದುರಸ್ತಿ ಪಡಿಸಲು ಗ್ರಾಮಸ್ಥರ ಮನವಿ

20/05/2022

ನಾಪೋಕ್ಲು ಮೇ 20 : ಸ್ಥಳೀಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆರಿಯಪರಂಬು – ಕಲ್ಲು ಮೊಟ್ಟೆ ರಸ್ತೆ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚೆರಿಯಪರಂಬು ಗ್ರಾಮಸ್ಥರು ಶಾಸಕ ಕೆ.ಜಿ.ಬೋಪಯ್ಯ ಅವರಿಗೆ  ಮನವಿ ಸಲ್ಲಿಸಿದರು.
ನಾಪೋಕ್ಲು ನಾಡಕಛೇರಿಯಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕಾಮಕ್ಕೆ  ಶಾಸಕರು ಆಗಮಿಸಿದ ಸಂದರ್ಭ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರ ನೇತೃತ್ವದಲ್ಲಿ ಗ್ರಾಮಸ್ಥರಾದ ಪರವಂಡ ಸಿರಾಜ್, ಸುನಿಲ್, ಹಾಸಿಂ, ಪೀರು ಸಾಹೇಬ್, ಸಂಶುದ್ದೀನ್, ಶಮೀರ್, ಅಲ್ತಾಫ್, ಅಶ್ರಫ್  ಮತ್ತಿತರರು ಮನವಿ ಪತ್ರ ನೀಡಿ ರಸ್ತೆ ದುರಸ್ತಿಗೆ ಕೋರಿದರು.
ಕಳೆದ 10ವರ್ಷಗಳಿಂದ ಡಾಂಬರು ಕಾಣದ ಚೆರಿಯಪರಂಬು- ಕಲ್ಲುಮೊಟ್ಟೆ  ರಸ್ತೆಯಲ್ಲಿರುವ ಗುಂಡಿಗಳಿಂದ ಕೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಯೋಗ್ಯವಾಗಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ಈ ಹಿಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.  ( ವರದಿ : ಝಕರಿಯ ನಾಪೋಕ್ಲು )