ಕುಶಾಲನಗರ ಮೊಗೇರ ಸೇವಾ ಸಮಾಜದ ಸಭೆ : ಮೊಗೇರ ಗ್ರಾಮ ವಿಕಾಸ ಯೋಜನೆಯ ಯಶಸ್ಸಿಗೆ ಕರೆ

05/07/2022

ಮಡಿಕೇರಿ ಜು.5 : ಮೊಗೇರ ಸಮಾಜದ ಜನಗಣತಿಗಾಗಿ “ಮೊಗೇರ ಗ್ರಾಮ ವಿಕಾಸ ಯೋಜನೆ”ಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದ್ದು, ಇದರ ಯಶಸ್ಸಿಗಾಗಿ ಎಲ್ಲರೂ ಕೈಜೋಡಿಸಬೇಕೆಂದು ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಕರೆ ನೀಡಿದ್ದಾರೆ.
ಮೊಗೇರ ಸೇವಾ ಸಮಾಜದ ಕುಶಾಲನಗರ ತಾಲ್ಲೂಕು ಸಮಿತಿಯ ವಾರ್ಷಿಕ ಸಭೆ ಹಾಗೂ ಸಮಿತಿಯ ಪುನರ್ ರಚನಾ ಸಭೆ ವಾಲ್ನೂರು-ತ್ಯಾಗತ್ತೂರು ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದಾಯದ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ನಿಖರವಾದ ಜನಸಂಖ್ಯೆ ತಿಳಿಯಲು “ಮೊಗೇರ ಗ್ರಾಮ ವಿಕಾಸ ಯೋಜನೆ”ಯಡಿ ಜನಗಣತಿ ಕಾರ್ಯ ಮಾಡಲು ತಯಾರಿ ನಡೆದಿದೆ. ಈ ಯೋಜನೆಯ ಯಶಸ್ಸಿಗಾಗಿ ವಿದ್ಯಾವಂತರನ್ನು ನೇಮಿಸಿಕೊಳ್ಳಲಾಗುವುದು ಎಂದರು.
ಜಿಲ್ಲೆಯ ಪ್ರತೀ ತಾಲ್ಲೂಕು, ಹೋಬಳಿ ಮತ್ತು ಗ್ರಾಮದ ಮೊಗೇರ ಸಮಿತಿಯವರು ಗ್ರಾಮ ವಿಕಾಸ ಯೋಜನೆಯ ಸಿಬ್ಬಂದಿಗೆ ಸಂಪೂರ್ಣ ಮಾಹಿತಿ ನೀಡುವಂತೆ ಗೌತಮ್ ಶಿವಪ್ಪ ಮನವಿ ಮಾಡಿದರು.
ಗೌರವಾಧ್ಯಕ್ಷ ಪಿ.ಎಂ.ರವಿ ಮಾತನಾಡಿ, ಮೊಗೇರ ಸಮಾಜದ ಆಚಾರ, ವಿಚಾರ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಹಾಗೂ “ಮೊಗೇರ ಗ್ರಾಮ ವಿಕಾಸ ಯೋಜನೆ”ಯನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು.
ಜಿಲ್ಲಾ ಸಮಿತಿ ಸದಸ್ಯ ಎ.ಸುರೇಶ್ ಮಾತನಾಡಿ, “ಮೊಗೇರ ಗ್ರಾಮ ವಿಕಾಸ ಯೋಜನೆ”ಯ ಕುರಿತು ವಿವರಿಸಿದರು. ತಾಲ್ಲೂಕು ಅಧ್ಯಕ್ಷ ಪಿ.ಟಿ.ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯನ್ನು ಪುನರ್ ರಚಿಸಲಾಯಿತು. ಅಧ್ಯಕ್ಷರಾಗಿ ಪಿ.ಜಿ.ಗಣೇಶ್ ಹಾಗೂ ಗೌರವಾಧ್ಯಕ್ಷರಾಗಿ ಪಿ.ಟಿ.ಮುತ್ತಪ್ಪ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಪ್ರೇಮ ಹಾಗೂ ಮಣಿ, ಪ್ರಧಾನ ಕಾರ್ಯದರ್ಶಿಯಾಗಿ ಭಾಗೀರಥಿ, ಕಾರ್ಯದರ್ಶಿ ಪಿ.ಎಂ.ರಮ್ಯ, ಖಜಾಂಚಿ ಗೋಪಾಲ, ಗೌರವ ಸಲಹೆಗರರಾಗಿ ಸೀನ ಹಾಗೂ ಆನಂದ ನೇಮಕಗೊಂಡರು.